ಕೊಲ್ಲಂ: ಜುಲೈ 17ರಂದು ರಾಷ್ಟ್ರಾದ್ಯಂತ ನೀಟ್ ಪರೀಕ್ಷೆ (ವೈದ್ಯಕೀಯ ಪ್ರವೇಶ ಪರೀಕ್ಷೆ) ನಡೆದಿತ್ತು. ಆದರೆ ಕೇರಳದ ಕೊಲ್ಲಂನ ಚಾತಮಂಗಲಂನಲ್ಲಿರುವ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ಈ ಪರೀಕ್ಷೆ ಬರೆಯಲು ಹಾಜರಾದ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಪರೀಕ್ಷಾ ಮೇಲ್ವಿಚಾರಕರು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಪರೀಕ್ಷೆ ಬರೆಯುವುದಕ್ಕೂ ಮೊದಲು ಒಳ ಉಡುಪು ಬ್ರಾ ಬಿಚ್ಚುವಂತೆ ಹೇಳಿದ್ದಾರೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಪರೀಕ್ಷೆಗೆ ಹೋಗಿದ್ದ ವಿದ್ಯಾರ್ಥಿನಿಯೊಬ್ಬಳ ತಂದೆ ಈ ಬಗ್ಗೆ ಕೊಟ್ಟಾರಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಹಾಗೇ, ಮಾನವ ಹಕ್ಕು ಆಯೋಗ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು 15ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಕೊಲ್ಲಂ ಗ್ರಾಮಾಂತರ ಎಸ್‌ಪಿಗೆ ಸೂಚಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ನೀಟ್ ಪರೀಕ್ಷಾರ್ಥಿಗಳಿಗೆ ನಿಗದಿಪಡಿಸಿದ ವಸ್ತ್ರಸಂಹಿತೆಯನ್ನು ಈ ಹುಡುಗಿಯರು ಪಾಲಿಸಿದ್ದರು. ಆದರೂ ಪರೀಕ್ಷಾ ಮೇಲ್ವಿಚಾರಕರು ಹೀನಾಯವಾಗಿ ವರ್ತಿಸಿದ್ದಾರೆ. ಶೇ.90ರಷ್ಟು ಹುಡುಗಿಯರಿಗೆ ಒಳುಡುಪು ಬಿಚ್ಚಿಟ್ಟು, ಅದನ್ನೆಲ್ಲ ಸ್ಟೋರ್ ರೂಮ್‌ನಲ್ಲಿ ಇಟ್ಟು ಪರೀಕ್ಷೆಗೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ತಮ್ಮ ಬ್ರಾ ತೆಗೆದು, ಸ್ಟೋರ್ ರೂಮ್‌ನಲ್ಲಿರುವ ಪೆಟ್ಟಿಗೆಯೊಂದರಲ್ಲಿ ಹಾಕಿಟ್ಟು ಪರೀಕ್ಷೆ ಬರೆದಿದ್ದಾರೆ. ಇದು ಮಕ್ಕಳಿಗೆ ನೀಡಿದ ಮಾನಸಿಕ ಹಿಂಸೆ ಎಂದು ಆ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಸನ್ನಿವೇಶ ಎದುರಿಸಿದ ಹಲವು ವಿದ್ಯಾರ್ಥಿನಿಯರೂ ಕೂಡ ಇದೇ ಆರೋಪ ಮಾಡಿದ್ದಾರೆ.
ಎನ್‌ಟಿಎ ವಿಧಿಸಿರುವ ಡ್ರೆಸ್ ಕೋಡ್‌ನ ಅನ್ವಯ ಪರೀಕ್ಷಾರ್ಥಿಗಳು ಯಾವುದೇ ಲೋಹದ ವಸ್ತುಗಳು ಇರುವ ಉಡುಪು ಧರಿಸಿ ಅಥವಾ ಲೋಹದ ವಸ್ತುಗಳನ್ನು ಇಟ್ಟುಕೊಂಡು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವಂತಿಲ್ಲ. ಇದರ ಅನ್ವಯ ಬೆಲ್ಟ್‌ಗಳನ್ನು ನಿಷೇಧಿಸಲಾಗಿದೆಯೇ ಹೊರತು ಇದು ಬ್ರಾಕ್ಕೆ ಇರುವ ಹುಕ್‌ಗಳಿಗೆ ಅನ್ವಯ ಆಗುವುದಿಲ್ಲ. ಆದರೆ ಕೊಲ್ಲಂನ ಪರೀಕ್ಷಾ ಕೇಂದ್ರದಲ್ಲಿ ನಿಯಮವನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಪರೀಕ್ಷಾರ್ಥಿಗಳನ್ನು ಮೆಟಾ ಡಿಟೆಕ್ಟರ್ ತಪಾಸಣೆಗೆ ಒಳಪಡಿಸಿದಾಗ ಒಳ ಉಡುಪಿನಲ್ಲಿರುವ ಹುಕ್‌ಗಳ ಕಾರಣದಿಂದ ಡಿಟೆಕ್ಟರ್ ಸದ್ದು ಮಾಡಿದೆ. ಅಷ್ಟಕ್ಕಾಗಿ, ಸುಮಾರು 90 ಪರ್ಸಂಟ್ ವಿದ್ಯಾರ್ಥಿಗಳ ಬ್ರಾ ಬಿಚ್ಚಿಸಿ ಪರೀಕ್ಷೆಗೆ ಕೇಂದ್ರದೊಳಗೆ ಕಳಿಸಲಾಗಿದೆ ಎಂದು ದೂರು ಕೊಟ್ಟ ವ್ಯಕ್ತಿ ವಿವರಿಸಿದ್ದಾರೆ.
ಆದರೆ ಈ ಆರೋಪವನ್ನು ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಆಫ್ ಟೆಕ್ನಾಲಜಿ ನಿರಾಕರಿಸಿದೆ. ಪರೀಕ್ಷಾರ್ಥಿಗಳನ್ನು ಸ್ಕ್ರೀನಿಂಗ್‌ಗೆ ಒಳಪಡಿಸುವ, ಮೆಟಾ ಡಿಟೆಕ್ಟರ್ ತಪಾಸಣೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸಿದ್ದು ಬಾಹ್ಯ ಏಜೆನ್ಸಿಗಳು. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಹೇಳಿದೆ. ಹಾಗೇ, ಇನ್ನೊಬ್ಬಳು ಮುಸ್ಲಿಂ ಹುಡುಗಿ, ತನಗೆ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ: ಕೇರಳದಲ್ಲಿ ಓಣಂ ಲಾಟರಿಯ ಮೊದಲ ಬಹುಮಾನ ಮೊತ್ತ 25 ಕೋಟಿ ರೂ.ಗೆ ಏರಿಕೆ