Site icon Vistara News

ನೀಟ್‌ ಪರೀಕ್ಷೆ ಮಂದೂಡಲು ಆಗ್ರಹಿಸಿ ಪ್ರತಿಭಟನೆ ತೀವ್ರ; ಟ್ರೆಂಡ್‌ ಆಗ್ತಿದೆ ಚಲೋ ಮೋದಿ ಆವಾಸ್

NEET Exam

ನವದೆಹಲಿ: ಪ್ರಸಕ್ತ ಸಾಲಿನ ʻನೀಟ್ʼ (NEET 2022) ಪರೀಕ್ಷೆಯನ್ನು ಮುಂದೂಡಬೇಕೆಂದು ಆಗ್ರಹಿಸಿ ಕೆಲವು ಕಾಲದಿಂದ ಪ್ರತಿಭಟಿಸುತ್ತಿರುವ ಪರೀಕ್ಷಾರ್ಥಿಗಳು, ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ತಮ್ಮ ಅಹವಾಲು ಬೇರೆಲ್ಲೂ ಮಾನ್ಯವಾಗದೆ ಇರುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಈ ವಿದ್ಯಾರ್ಥಿಗಳು ಉದ್ದೇಶಿಸಿದ್ದಾರೆ. ಇದಕ್ಕಾಗಿ ʻಚಲೋ ಮೋದಿ ಆವಾಸ್(Chalo Modi Awas)ʼ ಎಂಬ ಹ್ಯಾಷ್‌ಟ್ಯಾಗ್‌ನಡಿ ಸೋಷಿಯಲ್‌ ಮೀಡಿಯಾದಲ್ಲಿ ಅಭಿಯಾನವನ್ನೂ ಆರಂಭಿಸಿದ್ದಾರೆ.

ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ʻನೀಟ್ʼ ಪರೀಕ್ಷೆಯನ್ನು 40 ದಿನಗಳ ಕಾಲ ಮುಂದೂಡಲು ಈ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ಈ ಪರೀಕ್ಷೆಯ ಸಿದ್ಧತೆಗೆ ಅಗತ್ಯ ಸಮಯಾವಕಾಶ ದೊರೆತಿಲ್ಲ ಮತ್ತು ಇತರ ಕೆಲವು ಪ್ರವೇಶ ಪರೀಕ್ಷೆಗಳು ಒಟ್ಟೊಟ್ಟಿಗೆ ನಡೆಯುತ್ತಿವೆ ಎಂಬುದು ಅವರ ವಾದ. ಈ ಬಗ್ಗೆ ಕಳೆದ ತಿಂಗಳು ಸಂಬಂಧಪಟ್ಟ ಸಚಿವರುಗಳಿಗೆ ಪತ್ರವನ್ನೂ ಬರೆದಿದ್ದಾರೆ. ಇಂಟರ್‌ನೆಟ್‌ನಲ್ಲಿ ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನೀಟ್‌ ಮುಂದೂಡುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ ಈಗ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುವುದೊಂದೇ ತಮಗೆ ಉಳಿದಿರುವ ಮಾರ್ಗ ಎಂಬುದು ಅವರ ಅಳಲು.

ಸುಮಾರು 18 ಲಕ್ಷಕ್ಕೂ ಹೆಚ್ಚು ಮಂದಿ ಈ ಬಾರಿ ʻನೀಟ್ʼ ಪರೀಕ್ಷೆ ತೆಗೆದುಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಈ ಸಂಖ್ಯೆ ಅತ್ಯಧಿಕ ಎನ್ನಲಾಗಿದೆ. ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್ಎಂಎಸ್ ಸೇರಿದಂತೆ ಹಲವಾರು ವೈದ್ಯಕೀಯ ತರಗತಿಗಳ ಪ್ರವೇಶಾತಿಗೆ ಈ ಪರೀಕ್ಷೆ ಅತ್ಯಗತ್ಯವಾಗಿದೆ.

ಇದನ್ನೂ ಓದಿ: CET exams: ನಾಳೆಯಿಂದ ಪರೀಕ್ಷೆ: ನೀಟ್‌ ಮಾದರಿಯಲ್ಲಿ ನಡೆಯೋ ಎಕ್ಸಾಂಗೆ ಹೋಗೋ ಮುನ್ನ ಇದನ್ನು ಗಮನಿಸಿ

Exit mobile version