ತಿರುವನಂತಪುರ: ಜುಲೈನಲ್ಲಿ ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ಸಂದರ್ಭದಲ್ಲಿ ಕೇರಳದ ಕೊಲ್ಲಂನಲ್ಲಿ ಒಂದಷ್ಟು ಹುಡುಗಿಯರಿಗೆ ಒಳ ಉಡುಪು ಬಿಚ್ಚಿಸಲಾಗಿದೆ ಎಂಬ ಆರೋಪ ದೊಡ್ಡ ಮಟ್ಟದ ವಿವಾದ (NEET frisking row) ಸೃಷ್ಟಿಸಿತ್ತು. ಚಾತಮಂಗಲಂನಲ್ಲಿರುವ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಆಫ್ ಟೆಕ್ನಾಲಜಿ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಹೋಗಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಬ್ರಾ ಬಿಚ್ಚಿಸಿ, ಕಳಿಸಲಾಗಿದೆ ಎಂದು ಅಂದು ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳ ತಂದೆಯೇ ದೂರು ನೀಡಿದ್ದರು. ಅಂದು ಯಾವೆಲ್ಲ ವಿದ್ಯಾರ್ಥಿನಿಯರಿಗೆ ಈ ಕೆಟ್ಟ ಅನುಭವ ಆಗಿದೆಯೋ, ಅವರಿಗೆ ಮರು ಪರೀಕ್ಷೆಗೆ ಅವಕಾಶ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (NTA) ಇದೀಗ ಹೇಳಿದೆ. ಅಂದು ಸಂತ್ರಸ್ತರಾಗಿದ್ದ ಹುಡುಗಿಯರಿಗೆ ಸೆಪ್ಟೆಂಬರ್ 4ರಂದು ಮತ್ತೊಮ್ಮೆ ನೀಟ್ ಪರೀಕ್ಷೆ ನಡೆಸಲಾಗುವುದು, ಈ ಬಗ್ಗೆ ಅವರಿಗೆ ಇ ಮೇಲ್ ಕಳಿಸಲಾಗಿದೆ ಎಂದೂ ಎನ್ಟಿಎ ಮಾಹಿತಿ ನೀಡಿದೆ.
ಜುಲೈ 17ರಂದು ರಾಷ್ಟ್ರಾದ್ಯಂತ ನೀಟ್ ಪರೀಕ್ಷೆ ನಡೆದಿತ್ತು. ಮರುದಿನವೇ ಕೇರಳದಲ್ಲಿ ಒಳ ಉಡುಪಿನ ವಿವಾದ ಎದ್ದಿತ್ತು. ‘ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಆಫ್ ಟೆಕ್ನಾಲಜಿ’ ಪರೀಕ್ಷಾ ಕೇಂದ್ರದಲ್ಲಿ ನನ್ನ ಮಗಳು ಪರೀಕ್ಷೆ ಬರೆದಿದ್ದಾಳೆ. ಆದರೆ ಕೇಂದ್ರಕ್ಕೆ ಹೋದ ಆಕೆ ಮತ್ತು ಸುಮಾರು ಶೇ.90ರಷ್ಟು ವಿದ್ಯಾರ್ಥಿನಿಯರ ಮೇಲೆ ಅಲ್ಲಿನ ಮೇಲ್ವಿಚಾರಕರು ದೌರ್ಜನ್ಯ ನಡೆಸಿದ್ದಾರೆ. ಮೆಟಲ್ ಡಿಟೆಕ್ಟರ್ ತಪಾಸಣೆ ಮಾಡಿದಾಗ, ವಿದ್ಯಾರ್ಥಿನಿಯರ ಬ್ರಾ ಹುಕ್ನ ಕಾರಣಕ್ಕೆ ಅದು ಸದ್ದು ಮಾಡಿದೆ. ಹೀಗಾಗಿ ಅವರಿಗೆಲ್ಲ ಒಳ ಉಡುಪು ಬಿಚ್ಚುವಂತೆ ಹೇಳಲಾಗಿದೆ. ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಲೇ, ತಮ್ಮ ಬ್ರಾ ಬಿಚ್ಚಿ, ಕೋಣೆಯೊಂದರಲ್ಲಿ ಇಟ್ಟು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಮಾನಸಿಕ ಹಿಂಸೆ ಉಂಟಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದರು. ಕೊಟ್ಟಾರಕರ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು.
ಈ ವಿವಾದ ಎದ್ದ ನಂತರ ರಾಷ್ಟ್ರೀಯ ತನಿಖಾ ದಳ ಸಮರ್ಥನೆ ನೀಡಿ, ‘ನಮಗೆ ಬಂದ ಮಾಹಿತಿ ಪ್ರಕಾರ ಕೇರಳದ ಕೊಲ್ಲಂ ಸೇರಿ ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆ ಬರೆಯಲು ಬಂದ ಹುಡುಗಿಯರಿಗೆ ಒಳ ಉಡುಪು ಬಿಚ್ಚಿಸಿಲ್ಲ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ’ ಎಂದು ಹೇಳಿಕೊಂಡಿತ್ತು. ಹಾಗೇ, ತನಿಖೆಗಾಗಿ ಮೂವರು ಸದಸ್ಯರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನೂ ರಚಿಸಿತ್ತು. ಮಹಿಳಾ ಆಯೋಗ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಘಟನೆ ನಡೆದ ದಿನ ಪರೀಕ್ಷಾ ಕೇಂದ್ರದಲ್ಲಿದ್ದ ಐವರು ಮಹಿಳಾ ಸಿಬ್ಬಂದಿಯನ್ನೂ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ:ನೀಟ್ ಪರೀಕ್ಷಾರ್ಥಿಗಳ ಬ್ರಾ ಬಿಚ್ಚಿಸಿದ ಪ್ರಕರಣ; ಐವರು ಮಹಿಳೆಯರನ್ನು ಬಂಧಿಸಿದ ಕೇರಳ ಪೊಲೀಸ್