ಬೆಂಗಳೂರು/ನವದೆಹಲಿ: ಈ ಬಾರಿಯ ನೀಟ್ ಪರೀಕ್ಷೆಯ (NEET UG 2024) ಫಲಿತಾಂಶ ಜೂ.4ರಂದು ಪ್ರಕಟಗೊಂಡಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೇ 5ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು.
ದೇಶದಲ್ಲಿ ಮೊದಲ ರ‍್ಯಾಂಕ್ ಪಡೆದ ಟಾಪ್ 100 ವಿದ್ಯಾರ್ಥಿಗಳ ಪಟ್ಟಿಯಲ್ಲಿ 6 ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್, ಅರ್ಜುನ್ ಕಿಶೋರ್, ಪದ್ಮನಾಭ್ ಮೆನನ್, ಪ್ರಜ್ಞಾ ಪಿ.ಶೆಟ್ಟಿ, ಖುಷಿ ಮಗನೂರ್ ಎಂಬ ವಿದ್ಯಾರ್ಥಿಗಳು ಶೇ.99.98 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಸ್ಥಾನದಲ್ಲಿದ್ದಾರೆ.
ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.
ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದಿದ್ದ ನೀಟ್ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಉತ್ತರ ಪತ್ರಿಕೆಗಳ ಮರುಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕೆ ಅವಕಾಶವಿಲ್ಲ ಎನ್ನಲಾಗಿದೆ. ಇನ್ನೂ ನೀಟ್ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮೇ 29 ರಂದು ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಅಂತಿಮ ಕೀ ಉತ್ತರಗಳನ್ನು ಜೂನ್ 3 ರಂದು ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಬಿಡುಗಡೆಯಾಗಿರುವ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ನೀಟ್ ಯುಜಿ 2024ರ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ರಿಸಲ್ಟ್ ನೋಡಲು ಹೀಗೆ ಮಾಡಿ
- NTA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
-ಮುಖಪುಟದಲ್ಲಿ ಲಭ್ಯವಿರುವ ನೀಟ್ ಯುಜಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
-ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
-ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ
ಇದನ್ನೂ ಓದಿ: UGCET 2024: ಸಿಇಟಿ ಅಪ್‌ಡೇಟ್; ಜೂ.10ರಿಂದ ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ
ನೀಟ್ ಫಲಿತಾಂಶದ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ
ಬೆಂಗಳೂರು: ನೀಟ್ ಪರೀಕ್ಷೆಯ ಫಲಿತಾಂಶದ ಬಳಿಕವೇ ಎಂಜಿನಿಯರ್ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯ ನಿವಾರ್ಹಕ ನಿರ್ದೇಶಕ ಪ್ರಸನ್ನ (Education News) ತಿಳಿಸಿದ್ದಾರೆ. ನೀಟ್ ಫಲಿತಾಂಶಕ್ಕೂ ಮುನ್ನವೇ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಮೊದಲು ಮೆಡಿಕಲ್ ಸೀಟ್ ಹಂಚಿಕೆ ಮಾಡಿ ನಂತರ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು ಎಂದರು.
ಬೇರೆ ಬೇರೆ ಕಾಲೇಜಿನಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತದೆ. ಸೀಟ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಡೋನೇಷನ್ ಕೊಟ್ಟು ಅಡ್ಮಿಶನ್ ಮಾಡಿಸಬೇಡಿ. ಒಳ್ಳೆಯ ರ‍್ಯಾಂಕ್ ಪಡೆದವರಿಗೆ ಒಳ್ಳೆಯ ಕಾಲೇಜು ಸಿಗುತ್ತದೆ ಎಂದರು.
ಮತ್ತೊಂದು ಅವಕಾಶ
ನೀಟ್ ಪರೀಕ್ಷೆ ತೆಗೆದುಕೊಂಡಿದ್ದರೂ ರಾಜ್ಯದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾದರೆ ಕೆಇಎಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕೆಲವರು ಈ ರೀತಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳುತ್ತಿದ್ದು, ಅಂತಹವರಿಗೆ ಅನುಕೂಲ ಮಾಡಲು ನೀಟ್ ಫಲಿತಾಂಶದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.
ಇದನ್ನೂ ಓದಿ: KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಲಿಂಕ್ ಇಲ್ಲಿದೆ
1.24 ಲಕ್ಷ ಎಂಜಿನಿಯರಿಂಗ್ ಸೀಟುಗಳು ಲಭ್ಯ
ಇನ್ನೂ ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್ ಸೀಟುಗಳು ಲಭ್ಯವಿದೆ. ರ‍್ಯಾಂಕ್ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಇನ್ನೂ ಕಾಲೇಜು ಶುಲ್ಕವನ್ನು ನಿಗದಿ ಮಾಡಿಲ್ಲ. ಕಳೆದ ವರ್ಷ 40,110 ರೂಪಾಯಿ ಶುಲ್ಕ ಸರ್ಕಾರಿ ಕಾಲೇಜುಗಳಿಗೆ ಇತ್ತು. ಪ್ರಸಕ್ತ ಸಾಲಿನ ಸೀಟ್ ಮ್ಯಾಟ್ರಿಕ್ ಇನ್ನೂ ಸರ್ಕಾರದಿಂದ ಬಂದಿಲ್ಲ. ಬಂದ ನಂತರ ಕಾಲೇಜು/ಕೋರ್ಸ್ ವಾರ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ ಕೋರ್ಸ್ ಗಳ ಶುಲ್ಕ ನಿಗದಿ ಸಂಬಂಧ ಒಂದು ಸಭೆ ನಡೆದಿದ್ದು, ಸದ್ಯದಲ್ಲೇ ಆ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದರು.
ವೃತ್ತಿಪರ ಕೋರ್ಸ್‌ಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಈ ವಿಷಯದಲ್ಲಿ ಗೊಂದಲ ಬೇಡ. ಫಲಿತಾಂಶ ತಡ ಆಯಿತು, ಹೀಗಾಗಿ ಎಲ್ಲ ಸೀಟುಗಳನ್ನು ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಹೆಚ್ಚಿನ ಡೊನೇಷ್ ಪಡೆದು ಭರ್ತಿ ಮಾಡಿಕೊಳ್ಳುತ್ತಿವೆ ಎಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದು, ಅಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಪ್ರಸನ್ನ ಮನವಿ ಮಾಡಿದರು. ಕೆಇಎ ಮೂಲಕವೇ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಇಂತಹ ಸುಳ್ಳುಸುದ್ದಿಗಳಿಗೆ ಪೋಷಕರಾಗಲಿ/ ವಿದ್ಯಾರ್ಥಿಗಳಾಗಲಿ ಗಮನ ನೀಡಬಾರದು ಎಂದು ಅವರು ಹೇಳಿದರು.
ಆನ್‌ಲೈನ್‌ನಲ್ಲೇ ವೆರಿಫಿಕೇಶನ್
ಈ ಬಾರಿ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್ ಲೈನ್ ನಲ್ಲಿ ನಡೆಯುತ್ತದೆ. ಯಾರೂ ಕೆಇಎ ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ. ಎಲ್ಲ ಪ್ರಕ್ರಿಯೆಗಳು ಆನ್ ಲೈನ್‌ನಲ್ಲೆ ನಡೆಯಲಿದೆ. ಶೇ.100 ರಷ್ಟು ಡಾಕ್ಯುಮೆಂಟ್ ಪರಿಶೀಲನೆ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಕೆಇಎ ಮುಂದೆ ಬಂದು ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ. ಎಲ್ಲಾ ದಾಖಲಾತಿಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲನೆ ನಡೆಯಲಿದೆ ಎಂದರು. ನಿನ್ನೆ ಶನಿವಾರ (ಜೂ.1) ಸಂಜೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಹಠಾತ್ ಪ್ರಕಟಿಸಿದ ಬೆನ್ನಲ್ಲೇ ಭಾನುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಸುದ್ದಿಗೋಷ್ಠಿ ನಡೆಸಿ ಎಲ್ಲ ಮಾಹಿತಿಯನ್ನು ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ