Site icon Vistara News

Nepal Plane Crash | ಮಗ ಹುಟ್ಟಿದನೆಂದು ಪಶುಪತಿನಾಥನಿಗೆ ಹರಕೆ ತೀರಿಸಲು ಹೋಗಿದ್ದವನು ವಿಮಾನ ಅಪಘಾತಕ್ಕೆ ಬಲಿ

ಕಠ್ಮಂಡು: ನೇಪಾಳದಲ್ಲಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ (Nepal Plane Crash) ಭಾರತದ ಐವರು ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬರಾಗಿರುವ ಉತ್ತರ ಪ್ರದೇಶದ ಸೋನು, ತಮಗೆ ಮಗ ಹುಟ್ಟಿದನೆಂದು ಕಠ್ಮಂಡುವಿನ ಪಶುಪತಿನಾಥ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸುವುದಕ್ಕೆ ಹೋಗಿದ್ದರು ಎನ್ನುವ ವಿಚಾರ ಇದೀಗ ಹೊರಬಿದ್ದಿದೆ.

ಇದನ್ನೂ ಓದಿ: Nepal Plane Crash | ಪತಿಯಂತೆಯೇ ಕೊನೆಯುಸಿರೆಳೆದ ಪತ್ನಿ! ನೇಪಾಳದ ವಿಮಾನ ದುರಂತದಲ್ಲಿ ಮೃತ ಕೋ-ಪೈಲಟ್‌ ಅಂಜು ಕಥೆ
ಸೋನು ಜೈಸ್ವಾಲ್‌(35) ಗಾಜಿಪುರ್‌ ಜಿಲ್ಲೆಯ ಛಕ್‌ ಜೈನಾಬ್‌ ಗ್ರಾಮದ ನಿವಾಸಿ. ವಾರಾಣಸಿಯ ಸರ್ನತ್‌ನಲ್ಲಿ ಮದ್ಯದ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಅವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಗುವಾದರೆ ಪಶುಪತಿನಾಥನ ದರ್ಶನ ಮಾಡುವುದಾಗಿ ಹರಕೆ ಹೊತ್ತಿದ್ದರು. ಆರು ತಿಂಗಳ ಹಿಂದೆ ಅವರಿಗೆ ಗಂಡು ಮಗುವಾದ ಹಿನ್ನೆಲೆಯಲ್ಲಿ ಇದೀಗ ಹರಕೆ ತೀರಿಸುವುದಕ್ಕೆಂದು ತನ್ನ ಮೂವರು ಸ್ನೇಹಿತರೊಂದಿಗೆ ಕಠ್ಮಂಡುವಿಗೆ ಹೋಗಿದ್ದರು.
ಅಭಿಷೇಕ್‌ ಕುಶ್ವಾಹ್‌(25), ವಿಶಾಲ್‌ ಶರ್ಮಾ(22) ಹಾಗೂ ಅನಿಲ್‌ ಕುಮಾರ್‌ ರಾಜ್ಭಾರ್‌(27) ಅವರೊಂದಿಗೆ ಸೋನು ಜ.10ರಂದು ಕಠ್ಮಂಡುವಿಗೆ ತೆರಳಿದ್ದರು. ಪೋಖ್ರಾದಲ್ಲಿ ಪ್ಯಾರಾಗ್ಲೈಡಿಂಗ್‌ ಮಾಡುವ ನಿಟ್ಟಿನಲ್ಲಿ ಭಾನುವಾರ ವಿಮಾನದಲ್ಲಿ ತೆರಳುತ್ತಿದ್ದರು. ಆಗ ವಿಮಾನ ದುರಂತ ಸಂಭವಿಸಿದೆ.

ಇದನ್ನೂ ಓದಿ: ವಿಸ್ತಾರ TOP 10 NEWS | ನೇಪಾಳದಲ್ಲಿ ವಿಮಾನ ಪತನದಿಂದ, ಬೆಂಗಳೂರಿನಲ್ಲಿ ಸೋಮವಾರ ಪ್ರಿಯಾಂಕಾ ಕಾರ್ಯಕ್ರಮದವರೆಗಿನ ಪ್ರಮುಖ ಸುದ್ದಿಗಳಿವು
ಅಭಿಷೇಕ್‌ ಕಂಪ್ಯೂಟರ್‌ ಉದ್ಯಮ ನಡೆಸುತ್ತಿದ್ದ, ವಿಶಾಲ್‌ ಮೋಟಾರು ವಾಹನ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿದ್ದ ಹಾಗೆಯೇ ಅನಿಲ್‌ ಕುಮಾರ್‌ ಜನ ಸೇವಾ ಕೇಂದ್ರವನ್ನು ನಡೆಸುತ್ತಿದ್ದ. ಈ ನಾಲ್ವರು ಮಂಗಳವಾರ ಊರಿಗೆ ಮರಳುವವರಿದ್ದರು ಎಂದು ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ.
72 ಮಂದಿಯನ್ನು ಹೊತ್ತಿದ್ದ ಯೇತಿ ಏರ್‌ಲೈನ್ಸ್‌ನ ವಿಮಾನವು ಭಾನುವಾರ ನೇಪಾಳದ ಪೋಖ್ರಾ ಬಳಿ ಅಪಘಾತಕ್ಕೀಡಾಗಿದೆ. ಅದರಲ್ಲಿದ್ದ 68 ಮೃತ ದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಮೃತರಲ್ಲಿ ಐವರು ಭಾರತೀಯರಿದ್ದು, ನಾಲ್ವರು ಉತ್ತರ ಪ್ರದೇಶದವರಾಗಿದ್ದರೆ, ಇನ್ನೋರ್ವ ಬಿಹಾರದ ಸೀತಾಮರ್ಹಿಯವರಾಗಿದ್ದಾರೆ.

Exit mobile version