ನವ ದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವ ಕೌಶಲ್ ಕಿಶೋರ್ ಅವರ ಸೋದರಳಿಯ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಲಖನೌದ ದುಬಗ್ಗದಲ್ಲಿರುವ ಬಿಗ್ಗಾರಿಯಾ ಎಂಬ ಏರಿಯಾದಲ್ಲಿರುವ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಆದರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಶುರುಮಾಡಿಕೊಂಡಿದ್ದಾರೆ.
ನಂದ ಕಿಶೋರ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಆಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಇವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ದುಬಗ್ಗ ಪೊಲೀಸ್ ಅಧಿಕಾರಿ, ‘ನಂದ ಕಿಶೋರ್ ನೇಣು ಹಾಕಿಕೊಂಡಿದ್ದಾರೆ ಎಂದು ಆತನ ಸಹೋದರ ನಮಗೆ ಮಾಹಿತಿ ನೀಡಿದ್ದರು. ಅವರು ಅಷ್ಟರಲ್ಲಿ ನಂದ ಕಿಶೋರ್ರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣ ಹೋಗಿತ್ತು. ನಾವೀಗ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಕೌಶಲ್ ಕಿಶೋರ್ ಅವರು ಉತ್ತರ ಪ್ರದೇಶದ ಮೋಹನ್ಲಾಲ್ ಗಂಜ್ ಕ್ಷೇತ್ರದ ಸಂಸದ. 2021ರ ಮಾರ್ಚ್ನಲ್ಲಿ ಇವರ ಸೊಸೆ ಅಂಕಿತಾ (ಮಗ ಆಯುಷ್ ಪತ್ನಿ) ಆತ್ಮಹತ್ಯೆಗೆ ಯತ್ನಿಸಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ಈಕೆ ಕೌಶಲ್ ಕಿಶೋರ್ ಮನೆಯ ಎದುರು ನಿಂತು, ತನ್ನ ಕೈ ನರ ಕತ್ತರಿಸಿಕೊಂಡು ಸಾಯಲು ಪ್ರಯತ್ನಿಸಿದ್ದರು. ಅದಕ್ಕೆ ಪ್ರತಿಯಾಗಿ ಆಯುಷ್ ಒಂದು ವಿಡಿಯೊ ಬಿಡುಗಡೆ ಮಾಡಿ, ತನ್ನದೇನೂ ತಪ್ಪಿಲ್ಲ ಎಂಬುದನ್ನು ಹೇಳಿದ್ದರು. ಈ ವಿಚಾರವಾಗಿ ಕೊನೆಗೂ ಕೌಶಲ್ ಕಿಶೋರ್ ಏನೂ ಮಾತನಾಡಿರಲಿಲ್ಲ.
ಇನ್ನು ಇತ್ತೀಚೆಗೆ ಕೌಶಲ್ ಕಿಶೋರ್ ಶ್ರದ್ಧಾ ವಾಳ್ಕರ್ ಹತ್ಯೆಯ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಲಿವ್ ಇನ್ ರಿಲೇಶನ್ಶಿಪ್ಗಳು ಅಪರಾಧಗಳಿಗೆ ಕಾರಣವಾಗುತ್ತವೆ. ಅದು ಗೊತ್ತಿದ್ದೂ ಹೋಗಿ ಹುಡುಗಿಯರು ಅದರಲ್ಲಿ ಸಿಲುಕಿಕೊಳ್ಳುತ್ತಾರೆ. ಅದರಲ್ಲೂ ಇಂಥದ್ದರಲ್ಲೆಲ್ಲ ಸಿಲುಕುತ್ತಿರುವುದು ಶಿಕ್ಷಣವಂತ, ಸುಶಿಕ್ಷಿತ ಹುಡುಗಿಯರೇ ಆಗಿದ್ದಾರೆ ಎಂದು ಹೇಳಿದ್ದರು. ಅವರ ಈ ಮಾತುಗಳು ಟೀಕೆಗೆ ಗುರಿಯಾಗಿದ್ದವು.