ನವ ದೆಹಲಿ: ಇತ್ತೀಚೆಗಷ್ಟೇ ಭಾರತದ ವಾಯುಯಾನ ಕ್ಷೇತ್ರ ಪ್ರವೇಶಿಸಿದ್ದ ನೂತನ ಏರ್‌ಲೈನ್ಸ್ ಆಕಾಸ ಏರ್(Akasa Air)ನ ಡಾಟಾ ಸೋರಿಕೆಯಾಗಿದೆ. ಅಂದರೆ ಆಕಾಸ್ ಏರ್‌ಗೆ ಸಂಬಂಧಪಟ್ಟ ಮಾಹಿತಿಗಳು, ಪ್ರಯಾಣಿಕರ ಖಾಸಗಿ ವಿವರಗಳೆಲ್ಲ ಕಳವಾಗಿದೆ. ಒಟ್ಟಾರೆ ಡಾಟಾ ಭದ್ರತೆ ಉಲ್ಲಂಘನೆಯಾಗಿದೆ. ಡಾಟಾ ಸೋರಿಕೆಯಾಗಿದ್ದರ ಬಗ್ಗೆ ಆಕಾಸ ಏರ್ ಸಂಸ್ಥೆ ಭಾರತೀಯ ಗಣಕಯಂತ್ರ ಪ್ರತಿಕ್ರಿಯಾ ತಂಡ (CERT-In)ಕ್ಕೆ ತಿಳಿಸಿದ್ದು, ‘ನಮ್ಮ ಪ್ರಯಾಣಿಕರ ಹೆಸರು, ಲಿಂಗ, ಫೋನ್ ನಂಬರ್, ಇಮೇಲ್ ಐಡಿಗಳೂ ಸೋರಿಕೆಗೊಂಡಿವೆ. ಅಷ್ಟೇ ಅಲ್ಲ, ಏರ್ಲೈನ್ನ ಕೆಲವು ಪ್ರಮುಖ ಡಾಟಾಗಳೂ ಲೀಕ್ ಆಗಿವೆ’ ಎಂದು ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಈ ಬಗ್ಗೆ ತನಿಖೆ ನಡೆಸುವಂತೆ ಸಿಇಆರ್ಟಿ-ಇನ್ಗೆ ಒತ್ತಾಯಿಸಿದೆ.
ಆಕಾಸ ಏರ್ ಆಗಸ್ಟ್ 7ರಿಂದ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭಿಸಿದೆ. ವಿಮಾನಯಾನ ಪ್ರಾರಂಭ ಮಾಡಿ ಒಂದು ತಿಂಗಳೂ ಕಳೆದಿಲ್ಲ, ಆಗಲೇ ಅದರ ಡಾಟಾ ಭದ್ರತೆ ಉಲ್ಲಂಘನೆಯಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಲು ಈಗಾಗಲೇ ತಮ್ಮ ವಿವರಗಳನ್ನು ಸಲ್ಲಿಸಿರುವ ಪ್ರಯಾಣಿಕರಿಗೆ ಆಗಸ್ಟ್ 27 ಮತ್ತು 28ರಂದು ಆಕಾಸ ಏರ್ ಇ ಮೇಲ್ಗಳನ್ನು ಕಳಿಸಿದ್ದು, ‘ಆಗಸ್ಟ್ 25ರಂದು ನಮ್ಮ ಸಂಸ್ಥೆಯ ವೆಬ್ಸೈಟ್ನ ಲಾಗಿನ್-ಸೈನ್ ಅಪ್ ಸೇವೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಆಕಾಸ ಏರ್ನಲ್ಲಿ ನೋಂದಾಯಿತವಾದ ಪ್ರಯಾಣಿಕರ ಹೆಸರು, ಇಮೇಲ್ ಐಡಿ, ಫೋನ್ ನಂಬರ್, ವಿಳಾಸಗಳನ್ನು ಯಾರೋ ಅನಧಿಕೃತ ವ್ಯಕ್ತಿಗಳು ವೀಕ್ಷಿಸಿರುವ ಸಾಧ್ಯತೆ ಇದೆ’ ಎಂದು ತಿಳಿಸಿದೆ. ಹಾಗಂತ ಪ್ರಯಾಣಿಕರು ಎಲ್ಲಿಗೆ, ಯಾವಾಗ ಪ್ರಯಾಣಿಸಿದ್ದರು? ಎಷ್ಟು ಹಣ ಪಾವತಿ ಮಾಡಿದ್ದಾರೆ? ಎಂಬಿತ್ಯಾದಿ ಮಾಹಿತಿಗಳು ಸೋರಿಕೆ ಆಗಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಆಕಾಸ ಏರ್‌ಲೈನ್ಸ್ ರಾಕೇಶ್ ಜುಂಜುನ್ವಾಲಾ ಅವರ ಕನಸಿನ ಕೂಸು. ಈ ಏರ್ಲೈನ್ಸ್ನ ಪ್ರಮುಖ ಹೂಡಿಕೆದಾರರಾಗಿದ್ದ ಅವರು ಆಗಸ್ಟ್ 14ರಂದು ಮೃತಪಟ್ಟಿದ್ದಾರೆ. ಇವರಿಗೆ ವಿಮಾನಯಾನ ಸಂಸ್ಥೆ ಸ್ಥಾಪಿಸಲು ಭಾರತದ ವಿಮಾನಯಾನ ಮಹಾ ನಿರ್ದೇಶನಾಲಯ (DGCA)2021ರ ಆಗಸ್ಟ್‌ನಲ್ಲಿ ಅನುಮತಿ ನೀಡಿತ್ತು. ಅದಾದ ನಂತದ ನವೆಂಬರ್‌ನಲ್ಲಿ ಬೋಯಿಂಗ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಅದ ಅನ್ವಯ ಬೋಯಿಂಗ್ ಒಟ್ಟು 72 ಮ್ಯಾಕ್ಸ್ ವಿಮಾನಗಳನ್ನು ಆಕಾಸ ಏರ್‌ಗೆ ನೀಡಲಿದೆ. ಹಾಗೇ, ಈ ಸಂಸ್ಥೆಗೆ ಡಿಜಿಸಿಎ ಜುಲೈ 2ರಂದು ವಿಮಾನ ಹಾರಾಟಕ್ಕೆ ಸಂಬಂಧಪಟ್ಟು ಪ್ರಮಾಣಪತ್ರ ನೀಡಿತ್ತು. ಆಗಸ್ಟ್ 7ರಂದು ಮೊದಲ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಮುಂಬೈ-ಅಹ್ಮದಾಬಾದ್ ಮಾರ್ಗದಲ್ಲಿ ಹಾರಾಟ ನಡೆಸಿದೆ.
ಇದನ್ನೂ ಓದಿ: Rakesh Jhunjhunwala | ಸಾರಥಿಯ ನಿರ್ಗಮನಕ್ಕೆ ಆಕಾಸ ಏರ್ ಕಂಬನಿ, ಏರ್‌ಲೈನ್ಸ್ ಭವಿಷ್ಯವೇನು?