ಭಾರತೀಯ ನೌಕಾಪಡೆಗೆ ಹೊಸದಾಗಿ ನಿಯೋಜಿತಗೊಂಡ ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆಗೆ (Anti Submarine Vessel) ಕರ್ನಾಟಕದ ಕಾರವಾರದ ಬಂದರು ಸಮೀಪ ಇರುವ ದ್ವೀಪದ ಹೆಸರಿಡಲಾಗಿದೆ. ಕೋಲ್ಕತ್ತ ಮೂಲದ ಗಾರ್ಡನ್ ರೀಚ್ ಶಿಪ್ಬಿಲ್ಡ್ ಮತ್ತು ಎಂಜಿನಿಯರ್ಸ್ (GRSE)ದಿಂದ, ದೇಶೀಯವಾಗಿ ನಿರ್ಮಾಣಗೊಂಡ ಈ ಯುದ್ಧ ನೌಕೆಗೆ ‘ಅಂಜದೀಪ್’ (Anjadip Vessel)ಎಂದು ನಾಮಕರಣ ಮಾಡಲಾಗಿದೆ.
ಗೋವಾ-ಕರ್ನಾಟಕ ಗಡಿಯಲ್ಲಿ ಇರುವ ಅಂಜದೀಪ್ ದ್ವೀಪ, ಕಾರವಾರದ ಐದು ದ್ವೀಪಗಳಲ್ಲೇ ದೊಡ್ಡದು. ಸ್ಥಳೀಯವಾಗಿ ಇದನ್ನು ಅಂಜುದೀವ್ ಎಂದು ಕರೆಯಲಾಗುತ್ತದೆ. ಕಾರವಾರದ ಬಿಣಗಾ ಗ್ರಾಮದ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿದೆ. ಈಗ ಈ ಅಂಜದೀಪ್ ಹೆಸರನ್ನೇ ಯುದ್ಧನೌಕೆಗೆ ಇಡಲಾಗಿದೆ.. ಜಲಾಂತರ್ಗಾಮಿ ಯುದ್ಧ ನೌಕೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ, ಅವುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ ‘ಅಂಜದೀಪ್’ ನೌಕೆಯನ್ನು ಇಂದು ಚೆನ್ನೈನ ಕಟ್ಟುಪಲ್ಲಿ ಬಂದರಿನಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಅಂದರೆ, ನೇವಿಗೆ ಸೇರ್ಪಡೆಗೊಳಿಸಲಾಯಿತು.
ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಭಾಗವಾಗಿ ಒಟ್ಟು 8 ಜಲಾಂತರ್ಗಾಮಿ ನಿರೋಧಕ ಯುದ್ಧ ನೌಕೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 2019ರಲ್ಲಿ, ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಕೋಲ್ಕತ್ತದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ ಹಡಗು ನಿರ್ಮಾಣ ಸಂಸ್ಥೆ ಮಧ್ಯೆ ಒಪ್ಪಂದವಾಗಿದೆ. ಈ ಯೋಜನೆಯಡಿ ಮೊಟ್ಟಮೊದಲು ನೌಕಾಪಡೆಗೆ ನಿಯೋಜಿತಗೊಂಡ ಯುದ್ಧ ಹಡಗು ಅರ್ನಾಲಾ. ಇದನ್ನು 2022ರ ಡಿಸೆಂಬರ್ನಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಹಾಗೇ, ಎರಡನೇ ಜಲಾಂತರ್ಗಾಮಿ ನಿರೋಧಕ ಹಡಗು ಆಂಡ್ರೋತ್ನ್ನು ಇದೇ ವರ್ಷ ಮಾರ್ಚ್ 21ರಂದು ನೇವಿಗೆ ನಿಯೋಜಿಸಲಾಯಿತು. ಇದೀಗ ನಿಯೋಜನೆಗೊಂಡ ಅಂಜದೀಪ್ ಯುದ್ಧ ನೌಕೆ ಮೂರನೇಯದ್ದಾಗಿದೆ.
ಇದನ್ನೂ ಓದಿ: ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಿದ ಸಿಬ್ಬಂದಿ
2019ರ ಒಪ್ಪಂದದ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಯುದ್ಧ ನೌಕೆಗಳು ಶೇ.80ರಷ್ಟು ಸ್ವದೇಶಿಯಾಗಿ ಇರುತ್ತವೆ. ಉಳಿದ ಶೇ.20ರಷ್ಟು ವಿದೇಶಿ ಉಪಕರಣಗಳ ಅಳವಡಿಕೆ ಇರುತ್ತದೆ. 77 ಮೀಟರ್ಗಳಷ್ಟು ಉದ್ದವಿರುತ್ತವೆ. 900 ಟನ್ಗಳಷ್ಟು ಭಾರವನ್ನು ಹೊತ್ತು, 25 ಕ್ನಾಟ್ಗಳ ಗರಿಷ್ಠ ವೇಗದಲ್ಲಿ ಚಲಿಸಬಲ್ಲವು.