ಲೋಕಸಭೆ ಸದಸ್ಯನ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ (Rahul Gandhi Disqualified) ತಮ್ಮ ಟ್ವಿಟರ್ ಸ್ಟೇಟಸ್ನ್ನು ‘ಅನರ್ಹ ಸಂಸದ’ ಎಂದು ಬದಲು ಮಾಡಿಕೊಂಡಿದ್ದರು. ಈಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಶೇರ್ ಮಾಡಿಕೊಂಡು, ‘ಸತ್ಯ, ಧೈರ್ಯ ಮತ್ತು ಬಲಿದಾನ (ತ್ಯಾಗ)ಗಳು ಗಾಂಧಿ ಕುಟುಂಬದ ಶಕ್ತಿ ಮತ್ತು ಪರಂಪರೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿ ಕಾಂಗ್ರೆಸ್ ಮಾ.26ರಂದು ರಾಜ್ಘಾಟ್ನಲ್ಲಿ ಸತ್ಯಾಗ್ರಹ ನಡೆಸಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಷಣ ಮಾಡಿ, ತಮ್ಮ ತಂದೆ ರಾಜೀವ್ ಗಾಂಧಿ ತೀರಿಕೊಂಡಾಗ ರಾಹುಲ್ ಗಾಂಧಿ ಏನು ಮಾಡಿದರು ಎಂಬುದನ್ನು ಹೇಳಿದ್ದರು. ಅದೇ ಭಾಷಣದ ತುಣುಕು ಮತ್ತು ರಾಜೀವ್ ಗಾಂಧಿ ತೀರಿಕೊಂಡಾಗ ಅವರ ಮೃತದೇಹಕ್ಕೆ ರಾಹುಲ್ ಗಾಂಧಿ ಹೆಗಲು ಕೊಟ್ಟು ನಡೆಯುತ್ತಿರುವುದು, ಚಿತೆಗೆ ಅಗ್ನಿಸ್ಪರ್ಶ ಮಾಡುವ ದೃಶ್ಯಗಳನ್ನು ಸಂಯೋಜಿಸಿ, ಈ ವಿಡಿಯೊ ಮಾಡಲಾಗಿದೆ.
‘ಈಗ 32 ವರ್ಷಗಳ ಹಿಂದೆ ನನ್ನ ತಂದೆ ರಾಜೀವ್ ಗಾಂಧಿಯವರು ಮೃತಪಟ್ಟರು. ಅವರ ಶವವನ್ನು ಹೊತ್ತ ಸೇನಾ ಟ್ರಕ್ ಸಾಗುತ್ತಿದ್ದರೆ, ಅದರ ಹಿಂದೆ, ಬಿಸಿಲಲ್ಲಿ ರಾಹುಲ್ ಗಾಂಧಿ ನಡೆದುಕೊಂಡು ಹೋದರು. ಸುಮಾರು 10 ಮೈಲುಗಳಷ್ಟು ದೂರ ಶವಯಾತ್ರೆ ನಡೆಯಿತು. ಲಕ್ಷಾಂತರ ಜನರು ಹೆಜ್ಜೆಹಾಕಿದರು. ನನ್ನ ತಂದೆಯ ಮೃತದೇಹವನ್ನು ತ್ರಿವರ್ಣಧ್ವಜದಿಂದ ಸುತ್ತಲಾಗಿತ್ತು. ಅಂಥ ಹುತಾತ್ಮ ನನ್ನ ತಂದೆಗೂ ನೀವೆಲ್ಲ ಅನೇಕ ಬಾರಿ ಅವಮಾನ ಮಾಡಿದಿರಿ. ಅಷ್ಟೇ ಅಲ್ಲ, ಹುತಾತ್ಮನ ಮಗನಿಗೆ ದೇಶದ್ರೋಹಿ ಪಟ್ಟ ಕಟ್ಟಿದಿರಿ. ಅವನ ದೇಶಪ್ರೇಮವನ್ನೇ ಪ್ರಶ್ನಿಸುತ್ತಿದ್ದೀರಿ. ನೀವೆಲ್ಲ ನೆಹರೂ ಕುಟುಂಬದವರಾಗಿದ್ದರೂ, ನೆಹರೂ ಉಪನಾಮವನ್ನೇಕೆ ಬಳಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿಯೇ ಪ್ರಶ್ನಿಸುತ್ತಾರೆ. ಇದು ನಮ್ಮ ಇಡೀ ಕುಟುಂಬಕ್ಕೆ ಅವಮಾನ. ಕಾಶ್ಮೀರಿ ಪಂಡಿತರ ಸಂಪ್ರದಾಯಕ್ಕೇ ನೀವು ಅಪಮಾನ ಮಾಡಿದ್ದೀರಿ’ ಎಂದು ಪ್ರಿಯಾಂಕಾ ಗಾಂಧಿ ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು. ಹಾಗೇ, ರಾಜೀವ್ ಗಾಂಧಿ ಶವಯಾತ್ರೆಯ ದೃಶ್ಯವನ್ನೂ ನೋಡಬಹುದು.
ರಾಹುಲ್ ಗಾಂಧಿಯವರು 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾತಾಡುತ್ತ, ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ’ ಎಂದಿದ್ದರು. ಈ ಮೂಲಕ ಲಲಿತ್ ಮೋದಿ, ನೀರವ್ ಮೋದಿಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು. ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್, ಮಾರ್ಚ್ 23ರಂದು, ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿ, 2ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗೆ ರಾಹುಲ್ ಗಾಂಧಿಗೆ 2ವರ್ಷ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಲೋಕಸಭೆ ಸದಸ್ಯನ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿದೆ. ನಾನು ಗಾಂಧಿ ಕುಟುಂಬದವನು, ಸಾವರ್ಕರ್ ಅಲ್ಲ, ಹಾಗಾಗಿ ಯಾವುದಕ್ಕೂ ಕ್ಷಮೆಯನ್ನೂ ಕೇಳುವುದಿಲ್ಲ, ಹೆದರುವುದೂ ಇಲ್ಲ ಎಂದು ಈಗಾಗಲೇ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.