ನವ ದೆಹಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು ಅವರೀಗ ಟ್ರೆಂಡ್‌ನಲ್ಲಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗುವವರೆಗೂ ದ್ರೌಪದಿ ಮುರ್ಮು ಬಗ್ಗೆ ಅನೇಕರಿಗೆ ಗೊತ್ತಿರಲಿಲ್ಲ. ಅವರು ಬುಡಕಟ್ಟು ಸಮುದಾಯದವರು, ಜಾರ್ಖಂಡ್‌ನ ಮಾಜಿ ರಾಜ್ಯಪಾಲರು ಎಂಬುದು ಬಿಟ್ಟರೆ ಹೆಚ್ಚೇನೂ ಮಾಹಿತಿ ಇರಲಿಲ್ಲ. ಈಗಂತೂ ದ್ರೌಪದಿ ಮುರ್ಮು ಬಗ್ಗೆ ಹೆಚ್ಚೆಚ್ಚು ವಿಷಯ ತಿಳಿದುಕೊಳ್ಳಲು ಗೂಗಲ್ ಹುಡುಕಾಟ ನಡೆಸುವವರ ಸಂಖ್ಯೆ ಅಧಿಕವಾಗಿದೆ. ಈಗ ನಾವಿಲ್ಲಿ ಹೇಳ್ತಿರೋ ವಿಷಯ ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿದೆ.
ನಮ್ಮ ನೂತನ ರಾಷ್ಟ್ರಪತಿಯ ನಿಜವಾದ ಹೆಸರು “ದ್ರೌಪದಿʼ ಎಂದು ಅಲ್ಲವಂತೆ. ಅವರು ಹುಟ್ಟಿದಾಗ ಇಟ್ಟ ಹೆಸರೇ ಬೇರೆಯಂತೆ. ಈ ಬಗ್ಗೆ ಅವರು ಒಡಿಶಾದ ಮ್ಯಾಗ್‌ಜಿನ್‌ವೊಂದರ ಜತೆಗೆ ಮಾಹಿತಿ ಹಂಚಿಕೊಂಡಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. “ನನ್ನ ನಿಜವಾದ ಹೆಸರು ದ್ರೌಪದಿ ಅಲ್ಲ. ಸಾಮಾನ್ಯವಾಗಿ ನಮ್ಮ ಸಂತಾಲಿ ಜನಾಂಗದಲ್ಲಿ ತಲೆತಲಾಂತರದಿಂದಲೂ ಹೆಸರುಗಳು ಮುಂದುವರಿಯುತ್ತಲೇ ಇರುತ್ತವೆ. ಅಜ್ಜಿಯ ಹೆಸರನ್ನೇ ಮೊಮ್ಮಗಳಿಗೆ. ಹಾಗೇ ಗಂಡುಮಕ್ಕಳಿಗೆ ಅಜ್ಜನ ಹೆಸರನ್ನು ಇಡುತ್ತಾರೆ. ನನಗೂ ಹಾಗೇ “ಪುಟಿʼ ಎಂದು ನಾಮಕರಣ ಮಾಡಲಾಗಿತ್ತು. ಯಾಕೆಂದರೆ ಇದು ನನ್ನ ಅಜ್ಜಿಯ ಹೆಸರಾಗಿತ್ತು. ಆದರೆ ನಾನು ಶಾಲೆಗೆ ಹೋಗಲು ಶುರು ಮಾಡಿದ ಮೇಲೆ ನನ್ನ ಶಿಕ್ಷಕಿಯೊಬ್ಬರಿಗೆ ಅದು ಇಷ್ಟವಾಗಲಿಲ್ಲ. ಹಾಗಾಗಿ ʼದ್ರೌಪದಿʼ ಎಂದು ಹೆಸರಿಟ್ಟರು. ಮುಂದೆ ಈ ಹೆಸರು ದುರ್ಪ್ದಿ, ದೋರ್ಪ್ದಿ ಎಂಬೆಲ್ಲ ಸ್ವರೂಪಗಳನ್ನೂ ಪಡೆದು ಅಂತಿಮವಾಗಿ ನಾನು ದ್ರೌಪದಿಯಾಗಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಇನ್ನು ಮುರ್ಮು ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದನ್ನೂ ವಿವರಿಸಿದ ಅವರು “ನಮ್ಮ ಜನಾಂಗದ ಪ್ರಕಾರ ನನ್ನ ಸರ್‌ನೇಮ್ ಮೊದಲು ತುಡು ಎಂದಾಗಿತ್ತು. ಶಾಲಾ-ಕಾಲೇಜುಗಳಲ್ಲೆಲ್ಲ ಇದೇ ಹೆಸರೇ ಇತ್ತು. ನಂತ ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದ ಬಳಿಕ ನಾನೂ ನನ್ನ ಹೆಸರಿನ ಎದುರು ಮುರ್ಮು ಎಂದು ಬಳಸಲು ಪ್ರಾರಂಭಿಸಿದೆʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Draupadi Murmu | ಅಮೃತಕಾಲದಲ್ಲಿ ರಾಷ್ಟ್ರಪತಿ ಹುದ್ದೆ ಕೊಟ್ಟಿದ್ದಕ್ಕೆ ಧನ್ಯವಾದಗಳು: ದ್ರೌಪದಿ ಮುರ್ಮು