Site icon Vistara News

Opposition Meet: ಬಿಜೆಪಿ ವಿರುದ್ಧ ಒಂದಾದ ಪ್ರತಿಪಕ್ಷಗಳ ದಂಡು ಬೆಂಗಳೂರು ಕಡೆ; ಇಲ್ಲೇ ಮುಂದಿನ ಸಭೆ

Opposition Leaders

2024ರ ಲೋಕಸಭೆ ಚುನಾವಣೆ (Lok Sabha Election 2024)ಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಹಠ ತೊಟ್ಟು ಒಂದಾಗಿರುವ ಪ್ರತಿಪಕ್ಷಗಳ ಎರಡನೇ ಸಭೆ (Opposition Meet) ಜು.13 ಮತ್ತು 14ರಂದು ಬೆಂಗಳೂರಿನಲ್ಲಿ (Opposition Meet in Bengaluru) ನಡೆಯಲಿದೆ. ಜೂ.23ರಂದು ಬಿಹಾರದ ಪಾಟ್ನಾದಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್​, ಆಮ್ ಆದ್ಮಿ ಪಕ್ಷ, ಆರ್​ಜೆಡಿ, ಜೆಡಿಯು, ಸಮಾಜವಾದಿ ಪಕ್ಷ ಸೇರಿ ಸುಮಾರು 17 ಪಕ್ಷಗಳ ಪ್ರಮುಖರೆಲ್ಲ ಸೇರಿ ಸಭೆ ನಡೆಸಿದ್ದರು. ಹಾಗೇ, ಅಂದಿನ ಸಭೆಯಲ್ಲಿ ಬಹಳಷ್ಟು ವಿಷಯ ಚರ್ಚೆಯಾಯಿತಾದರೂ, ಯಾವುದೇ ಒಮ್ಮತಕ್ಕೆ ಬರಲಾಗದ ಕಾರಣ, ಮತ್ತೊಂದು ಸಭೆಯನ್ನು ಜುಲೈ 10-12ರವರೆಗೆ, ಶಿಮ್ಲಾದಲ್ಲಿ ನಡೆಸಲಾಗುವುದು ಎಂದು ಸಭೆ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್​ ಮಾಹಿತಿ ನೀಡಿದ್ದರು.

ಆದರೆ ಇಂದು ಎನ್​ಸಿಪಿ ಪಕ್ಷದ ವರಿಷ್ಠ ಶರದ್ ಪವಾರ್​ ಮಾಧ್ಯಮಗಳಿಗೆ ಮಾಹಿತಿ ನೀಡಿ ‘ಪ್ರತಿಪಕ್ಷಗಳ ಮುಂದಿನ ಸಭೆ ಜು. 13 ಮತ್ತು 14ರಂದು ಬೆಂಗಳೂರಲ್ಲಿ ನಡೆಯಲಿದೆ. ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಿಂದ ಪ್ರಧಾನಿ ಮೋದಿಯವರು ಈಗಾಗಲೇ ಗಲಿಬಿಲಿಗೊಂಡಿದ್ದಾರೆ’ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಸಭೆಯನ್ನು ಶಿಮ್ಲಾದಿಂದ ಬೆಂಗಳೂರಿಗೆ ಶಿಫ್ಟ್ ಮಾಡಿದ್ದೇಕೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Opposition Meet: ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್​ಗೆ ಬೈದ ದೀದಿ; ಮೂಡದ ಒಮ್ಮತ, ಶೀಘ್ರವೇ ಮತ್ತೆ ಸಭೆ

ಜೂ. 23ರಂದು ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಎನ್​ಸಿಪಿಯ ಶರದ್​ ಪವಾರ್, ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿ ಎಲ್ಲ ಪಕ್ಷಗಳ ಪ್ರಮುಖರೂ ಪಾಲ್ಗೊಂಡಿದ್ದರು. ಮೊದಲ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್​ ಪಕ್ಷಗಳು ಕಾಂಗ್ರೆಸ್ ವಿರುದ್ಧ ಹರಿಹಾಯ್ದವು. ಈ ಒಕ್ಕೂಟದ ಪಕ್ಷಗಳೊಂದಿಗೆ ಕಾಂಗ್ರೆಸ್ ಒಗ್ಗಟ್ಟಾಗಿರಬೇಕು. ಇಲ್ಲದೆ ಇದ್ದರೆ ಬಿಜೆಪಿ ಲಾಭ ಪಡೆದುಕೊಳ್ಳುತ್ತದೆ ಎಂದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇನ್ನು ಪ್ರತಿಪಕ್ಷಗಳ ಈ ನಾಲ್ಕೂವರೆ ತಾಸುಗಳ ಸಭೆಯನ್ನು ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಮತ್ತಿತರರು ಒಂದು ಫೋಟೋ ಸೆಶನ್​ ಎಂದು ಟೀಕಿಸಿದ್ದಾರೆ.

Exit mobile version