ಖಲಿಸ್ತಾನಿ ಪ್ರತ್ಯೇಕತಾವಾದಿ ಕಾಶ್ಮೀರ್ ಸಿಂಗ್ (Khalistani Terrorist Kashmir Singh) ಗಲ್ವಾಡ್ಡಿ ಅಲಿಯಾಸ್ ಬಲ್ಬೀರ್ ಸಿಂಗ್ನ ಸುಳಿವು ಕೊಟ್ಟವರಿಗೆ, ಹಿಡಿಯಲು ಸಹಾಯ ಮಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಘೋಷಣೆ ಮಾಡಿದೆ. ದೇಶದ ಅನೇಕ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದಡಿ ಕಾಶ್ಮೀರ್ ಸಿಂಗ್ ಎನ್ಐಎ (National Investigation Agency) ಅಧಿಕಾರಿಗಳಿಗೆ ಬೇಕಾದವನು ಆಗಿದ್ದಾನೆ. ಈತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ತಡೆ ಕಾಯ್ದೆ ಸೇರಿ, ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಎನ್ಐಎ ‘ಖಲಿಸ್ತಾನಿ ಉಗ್ರ ಕಾಶ್ಮೀರ್ ಸಿಂಗ್ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಗೊತ್ತಿದ್ದಲ್ಲಿ, ಸುಳಿವು ಸಿಕ್ಕಲ್ಲಿ ನಮಗೆ ತಿಳಿಸಿ. ಯಾರಾದರೂ ಕೊಟ್ಟ ಮಾಹಿತಿಯಿಂದ ಅವನ ಬಂಧನಕ್ಕೆ ಸಹಾಯವಾಗಿದ್ದೇ ಆದರೆ, ಅಂಥವರಿಗೆ 10 ಲಕ್ಷ ರೂಪಾಯಿ ಕೊಡಲಾಗುವುದು ಎಂದು ಎನ್ಐಎ ತಿಳಿಸಿದೆ. ಹಾಗೇ, ಸುಳಿವು/ಮಾಹಿತಿ ಕೊಟ್ಟವರ ಹೆಸರು/ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದೂ ಹೇಳಿದೆ.
ಇದನ್ನೂ ಓದಿ: ಖಲಿಸ್ತಾನಿಗಳು ತ್ರಿವರ್ಣ ಧ್ವಜ ತೆರವು ಮಾಡಿದ್ದ ಪ್ರಕರಣ; ತನಿಖೆಗಾಗಿ ಲಂಡನ್ಗೆ ಹೊರಟ ಎನ್ಐಎ ಅಧಿಕಾರಿಗಳು
ಈ ಕಾಶ್ಮೀರ್ ಸಿಂಗ್ ಹಲವು ಕೇಸ್ಗಳಲ್ಲಿ ಬೇಕಾದವನಾಗಿದ್ದಾನೆ. 2013ರಲ್ಲಿ ಗುರುದಾಸ್ಪುರದಲ್ಲಿ ಹಿಂದು ಮುಖಂಡನೊಬ್ಬನ ಮೇಲೆ ದಾಳಿ ಮಾಡಿದ್ದ. ಅದಕ್ಕಿಂತಲೂ ಮುಖ್ಯವಾಗಿ, 2016ರಲ್ಲಿ, ಇನ್ನುಳಿದ 20 ಖಲಿಸ್ತಾನಿ ಕ್ರಿಮಿನಲ್ಗಳ ಜತೆ ಸೇರಿ ಪಂಜಾಬ್ನ ನಭಾ ಜೈಲಿನ ಮೇಲೆ ದಾಳಿ ಮಾಡಿದ್ದ. ಆಗ ಇವರೆಲ್ಲ ಪೊಲೀಸ್ ಡ್ರೆಸ್ ಧರಿಸಿ ಜೈಲಿನ ಮೇಲೆ ಅಟ್ಯಾಕ್ ಮಾಡಿದ್ದರು. ಈ ಮೂಲಕ ಹಲವು ಖಲಿಸ್ತಾನಿಗಳು ಜೈಲಿಂದ ತಪ್ಪಿಸಿಕೊಂಡು ಹೋಗಲು ಕಾರಣರಾಗಿದ್ದರು. ಮೂಲತಃ ಲುಧಿಯಾನಾದವನಾದ ಇವನು ಹಲವು ವರ್ಷಗಳಿಂದಲೂ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದಾನೆ. ಇತ್ತೀಚೆಗೆ ಅಮೃತ್ಪಾಲ್ ಸಿಂಗ್ ಬಂಧನದ ಬೆನ್ನಲ್ಲೇ ತನಿಖಾ ಏಜೆನ್ಸಿಗಳು ಖಲಿಸ್ತಾನಿಗಳ ವಿರುದ್ಧ ತೀಕ್ಷ್ಣ ಕಾರ್ಯಾಚರಣೆ ನಡೆಸುತ್ತಿವೆ. ಖಲಿಸ್ತಾನಿ ಪ್ರಮುಖ ನಾಯಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಗೇ, ಈಗ ಎನ್ಐಎಯ ದೆಹಲಿ ಪ್ರಧಾನ ಕಚೇರಿ ಮತ್ತು ಚಂಡಿಗಢ ಶಾಖೆಯ ವಾಟ್ಸ್ಆ್ಯಪ್, ಟೆಲಿಗ್ರಾಂ ನಂಬರ್ಗಳನ್ನು, ಇಮೇಲ್ ವಿಳಾಸಗಳನ್ನೂ ಕೊಟ್ಟಿದ್ದಾರೆ.