ನವ ದೆಹಲಿ: ಭಯೋತ್ಪಾದಕರು-ಗ್ಯಾಂಗ್ಸ್ಟರ್ಗಳ ನಡುವಿನ ಸಂಪರ್ಕ/ ಈ ಎರಡೂ ಗುಂಪುಗಳು ಜತೆಯಾಗಿ ನಡೆಸುತ್ತಿರುವ ದೇಶ ವಿರೋಧಿ ಕೃತ್ಯಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ದಳ-NIA) ಅದರ ಮುಂದುವರಿದ ಭಾಗವಾಗಿ ದೇಶದ ಅನೇಕ ಕಡೆ ರೇಡ್ (NIA Raid) ಮಾಡಿದೆ. 6 ರಾಜ್ಯಗಳ ಒಟ್ಟು 100 ಪ್ರದೇಶಗಳಲ್ಲಿ ಎನ್‌ಐಎ ರೇಡ್ ಆಗಿದೆ.
ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಎನ್‌ಐಎ ದಾಳಿ ಮಾಡಿದ್ದಾರೆ. ಖಲಿಸ್ತಾನಿ ಉಗ್ರರು ಮತ್ತು ಗ್ಯಾಂಗ್ಸ್ಟರ್ಗಳು ಒಟ್ಟಾಗಿ ನಡೆಸುತ್ತಿರುವ ಸಂಚು, ದೇಶ ವಿರೋಧಿ ಕೃತ್ಯಗಳ ಬಗ್ಗೆ ಹಲವು ಮಾಹಿತಿ, ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಬುಧವಾರ ಮುಂಜಾನೆಯಿಂದಲೇ ಎನ್‌ಐಎ ಕಾರ್ಯಾಚರಣೆ ಶುರುವಾಗಿದೆ. ಜಮ್ಮು-ಕಾಶ್ಮೀರದ ಉಗ್ರರು, ಖಲಿಸ್ತಾನಿ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವ ಗ್ಯಾಂಗ್ಸ್ಟರ್ಗಳನ್ನು ಎನ್‌ಐಎ ಟಾರ್ಗೆಟ್ ಮಾಡಿದೆ. ಹಾಗೇ, ಈ ಶೋಧನೆ ವೇಳೆ ಕೆಲವು ಮಾದಕ ವಸ್ತು ಸಾಗಣೆಯಲ್ಲಿ ಭಾಗಿಯಾಗಿರುವ ಕ್ರಿಮಿನಲ್ಗಳನ್ನೂ ಎನ್‌ಐಎ ಬಂಧಿಸಿದೆ.
ಇದನ್ನೂ ಓದಿ: NIA Crackdown: ದೇಶವಿರೋಧಿ ಕೃತ್ಯ; ದೇಶದ ಹಲವೆಡೆ ಎನ್‌ಐಎ ದಾಳಿ, ಅಪಾರ ಶಸ್ತ್ರಾಸ್ತ್ರ ವಶ, ಆಸ್ತಿ ಜಪ್ತಿ
ಗ್ಯಾಂಗ್ಸ್ಟರ್ಗಳು, ಭಯೋತ್ಪಾದಕರು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆದಾರರ ಮಧ್ಯೆ ಪರಸ್ಪರ ಸಂಪರ್ಕವಿದೆ. ವಿಧ್ವಂಸಕ ಕೃತ್ಯಗಳಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ ಎಂಬ ದೂರು ದೆಹಲಿ ಠಾಣೆಯಲ್ಲಿ ದಾಖಲಾಗಿದ್ದಲ್ಲದೆ, ಅದಕ್ಕೆ ಪೂರಕವಾಗಿ ಹಲವು ಸಾಕ್ಷಿಗಳೂ ದೊರೆತಿವೆ. ಹೀಗಾಗಿ ಕೇಸ್ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದೆ. ಇದೇ ಪ್ರಕರಣ ಸಂಬಂಧ 2022ರ ಅಕ್ಟೋಬರ್ನಲ್ಲೂ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಸುಮಾರು 50 ಪ್ರದೇಶಗಳಲ್ಲಿ ಎನ್‌ಐಎ ರೇಡ್ ನಡೆದಿತ್ತು. ಹಾಗೇ, ನವೆಂಬರ್ನಲ್ಲೂ ದೆಹಲಿ, ಹರ್ಯಾಣ, ಪಂಜಾಬ್, ರಾಜಸ್ಥಾನಗಳಲ್ಲಿ ಎನ್‌ಐಎ ರೇಡ್ ಮಾಡಿತ್ತು.