ಮುಂಬೈ: ಜಾಗತಿಕ ಭಯೋತ್ಪಾದಕ, 1993ರ ಮುಂಬೈ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಬಗ್ಗೆ ಸುಳಿವು ಕೊಟ್ಟವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. ಹಾಗೇ, ಆತನ ಹೊಸ ಫೋಟೋವೊಂದನ್ನೂ ಬಿಡುಗಡೆ ಮಾಡಿದೆ. ದಾವೂದ್ ಇಬ್ರಾಹಿಂ (Dawood Ibrahim) ಆಪ್ತ ಚೋಟಾ ಶಕೀಲ್ ತಲೆಗೆ 20 ಲಕ್ಷ ರೂಪಾಯಿ ಮತ್ತು ಆತನ ಇನ್ನಿತರ ಸಹಚರರಾದ ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮೋನ್ ಮತ್ತಿತರರ ಸುಳಿವು ಕೊಟ್ಟವರಿಗೆ 15 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಎನ್ಐಎ ಪ್ರಕಟಣೆ ಹೊರಡಿಸಿದೆ.
ದಾವೂದ್ ಇಬ್ರಾಹಿಂ ನಡೆಸುತ್ತಿರುವ ಡಿ-ಕಂಪನಿ (ಅಂತಾರಾಷ್ಟ್ರೀಯ ಭಯೋತ್ಪಾದನಾ ಜಾಲ)ಗೆ ಸಂಬಂಧಪಟ್ಟು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಈ ಡಿ ಕಂಪನಿ ಅಂದರೆ ದಾವೂದ್ ಗ್ಯಾಂಗ್. ಇದು ಜಾಗತಿಕವಾಗಿ ಉಗ್ರ ಚಟುವಟಿಕೆ ನಡೆಸುತ್ತಿದೆ. ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಮಾರಕ ಅಸ್ತ್ರಗಳು, ಮಾದಕ ದ್ರವ್ಯ, ನಕಲಿ ಕರೆನ್ಸಿಗಳನ್ನು ಸ್ಮಗ್ಲಿಂಗ್ ಮಾಡುತ್ತಿದೆ. ಲಷ್ಕರೆ ತೊಯ್ಬಾ, ಜೈಷ್ ಎ ಮೊಹಮ್ಮದ್, ಅಲ್ ಖೈದಾ ಮತ್ತಿತರ ಉಗ್ರ ಸಂಘಟನೆಗಳಿಗಾಗಿ ಹಣ ಸಂಗ್ರಹ ಮಾಡುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಹೊತ್ತಿದ್ದು, ಎನ್ಐಎ ಗಂಭೀರವಾಗಿ ತನಿಖೆ ನಡೆಸುತ್ತಿದೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿಯೇ ಇದ್ದಾನೆ ಎಂದು ಹಲವು ಬಾರಿ ಸುದ್ದಿಗಳು ಹರಿದಾಡಿದ್ದರೂ ಆತ ಎಲ್ಲಿಯೂ ಸಿಗುತ್ತಿಲ್ಲ. ದಾವೂದ್ನನ್ನು 2003ರಲ್ಲಿ ಜಾಗತಿಕ ಉಗ್ರ ಎಂದು ಘೋಷಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ, ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ದಾವೂದ್ ಇಬ್ರಾಹಿಂ ಜಾಗತಿಕ ಉಗ್ರನೇ ಆಗಿದ್ದರೂ, ಭಾರತದ ವಾಂಟೆಡ್ ಲಿಸ್ಟ್ನಲ್ಲಿ ಟಾಪ್ನಲ್ಲಿದ್ದಾನೆ. 2008ರಲ್ಲಿ ಮುಂಬೈನಲ್ಲಿ ನಡೆದ ಸ್ಫೋಟದಲ್ಲೂ ಇವನ ಕೈವಾಡವಿದೆ.
ಹಲವು ಕೇಸ್ಗಳನ್ನು ಹೊತ್ತಿರುವ ದಾವೂದ್ ಇಬ್ರಾಹಿಂ ಮೇಲೆ 2022ರ ಫೆಬ್ರವರಿಯಲ್ಲಿ ಹೊಸದಾಗಿ ಮತ್ತೊಂದು ಪ್ರಕರಣವನ್ನು ಎನ್ಐಎ ದಾಖಲು ಮಾಡಿದೆ. ದಾವೂದ್ ಇಬ್ರಾಹಿಂನ ಡಿ ಕಂಪನಿಯ ಘಟಕವೊಂದು ಭಾರತದಲ್ಲಿ ಸ್ಥಾಪನೆಗೊಂಡಿದೆ. ಅದಕ್ಕೆ ಪಾಕಿಸ್ತಾನದ ಉಗ್ರಸಂಘಟನೆಗಳು ಮತ್ತು ಬೇಹುಗಾರಿಕಾ ಸಂಸ್ಥೆ ಐಎಸ್ಐ ಸಹಕಾರ ನೀಡಿವೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರ ಬೆನ್ನಲ್ಲೇ ಎನ್ಐಎ ಕೇಸ್ ದಾಖಲಿಸಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಇದನ್ನೂ ಓದಿ: ಸಾಲದ ವಿವಾದ: 75ರ ವೃದ್ಧನಿಂದ 35ರ ಮಹಿಳೆಯ ಅತ್ಯಾಚಾರ, ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆ