ನವ ದೆಹಲಿ: ಖಲಿಸ್ತಾನ್ ಲಿಬರೇಶನ್ ಫೋರ್ಸ್, ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ ಉಗ್ರ ಸಂಘಟನೆಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂದು ಪಂಜಾಬ್, ಜಮ್ಮು-ಕಾಶ್ಮೀರ ಮತ್ತು ದೆಹಲಿಯ ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಪಂಜಾಬ್ನಲ್ಲಿ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಮತ್ತು ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯ ಹಿಂದೆಯೂ ಇದೇ ಖಲಿಸ್ತಾನಿ ಉಗ್ರರ ಕೈವಾಡ ಇದೆ ಎಂಬುದು ಬಹಿರಂಗಗೊಂಡಿದೆ. ಗ್ಯಾಂಗ್ಸ್ಟರ್ಗಳು ಮತ್ತು ಉಗ್ರಸಂಘಟನೆಗಳು ಪರಸ್ಪರ ಸಹಕಾರದಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದಾರೆ ಎಂಬ ವಿಚಾರದ ತನಿಖೆಯನ್ನು ದೆಹಲಿ ಪೊಲೀಸರು ಆಗಸ್ಟ್ 26ರಿಂದ ಶುರು ಮಾಡಿದ್ದರು. ಅದನ್ನು ಬಳಿಕ ಎನ್ಐಎಗೆ ವರ್ಗಾಯಿಸಲಾಗಿದೆ. ಎನ್ಐಎ ಈಗಾಗಲೇ ಮೂರ್ನಾಲ್ಕು ಸುತ್ತಿನಲ್ಲಿ ವಿವಿಧ ರಾಜ್ಯಗಳಲ್ಲಿ ರೇಡ್ ಮಾಡಿದೆ.
ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೂ ಕೂಡ ಸಶಸ್ತ್ರಪಡೆಗಳು, ಸ್ಫೋಟಕಗಳು, ಐಇಡಿಗಳನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಕಳ್ಳಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದೆ. ಇನ್ನು ಎನ್ಐಎ ರೇಡ್ ವೇಳೆ, ಹಲವು ಡಿಜಿಟಲ್ ಉಪಕರಣಗಳನ್ನು, ವಿವಿಧ ಮಹತ್ವದ ಅಂಶಗಳುಳ್ಳ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೆನಡಾದಲ್ಲಿರುವ ಹಿಂದು ದೇಗುಲ ಸ್ವಾಮಿನಾರಾಯಣ ಮಂದಿರವನ್ನು ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು