ನವದೆಹಲಿ: ಗ್ಯಾಂಗ್ಸ್ಟರ್ಗಳು ಮತ್ತು ಭಯೋತ್ಪಾದಕರ ನಡುವಿನ ಸಂಪರ್ಕ-ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಮುಂಜಾನೆ ದೆಹಲಿ, ಹರ್ಯಾಣ, ಪಂಜಾಬ್, ರಾಜಸ್ಥಾನಗಳ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದೆ. ಸಿಧು ಮೂಸೇವಾಲಾ ಹತ್ಯೆಯ ಮಾಸ್ಟರ್ ಮೈಂಡ್, ಸದ್ಯ ಎನ್‌ಐಎ ವಶದಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಚಹರರು ಮತ್ತು ಅವರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ಮಾಡಲಾಗುತ್ತಿದೆ.
ಗ್ಯಾಂಗ್ಸ್ಟರ್ಗಳು, ಭಯೋತ್ಪಾದಕರು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆದಾರರ ಮಧ್ಯೆ ಪರಸ್ಪರ ಸಂಪರ್ಕವಿದೆ. ವಿಧ್ವಂಸಕ ಕೃತ್ಯಗಳಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ ಎಂಬ ದೂರು ದೆಹಲಿ ಠಾಣೆಯಲ್ಲಿ ದಾಖಲಾಗಿದ್ದಲ್ಲದೆ, ಅದಕ್ಕೆ ಪೂರಕವಾಗಿ ಹಲವು ಸಾಕ್ಷಿಗಳೂ ದೊರೆತಿವೆ. ಹೀಗಾಗಿ ಕೇಸ್ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದೆ. ಇದೇ ಪ್ರಕರಣ ಸಂಬಂಧ ಅಕ್ಟೋಬರ್ನಲ್ಲೂ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಸುಮಾರು 50 ಪ್ರದೇಶಗಳಲ್ಲಿ ಎನ್‌ಐಎ ರೇಡ್ ನಡೆದಿತ್ತು. ಕಳೆದ ವಾರದ ಪ್ರಮುಖ ಗ್ಯಾಂಗ್ಸ್ಟರ್ಗಳಾದ ಲಾರೆನ್ಸ್ ಬಿಷ್ಣೋಯಿ, ನವೀನ್ ದಾಬಾಸ್ ಮತ್ತು ಸುನಿಲ್ ಬಲಿಯಾನ್ ಅಲಿಯಾಸ್ ಟಿಲ್ಲು ತಾಜ್ಪುರಿಯಾನನ್ನು ಎನ್‌ಐಎ ಅಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದಿದ್ದರು.
ಇದೀಗ ಎನ್‌ಐಎ ರೇಡ್ ನಡೆದ ಬೆನ್ನಲ್ಲೇ ತನಿಖಾದಳದ ವಕ್ತಾರರೊಬ್ಬರು ಪ್ರತಿಕ್ರಿಯೆ ನೀಡಿ, ‘ಭಯೋತ್ಪಾದನಾ ಜಾಲವನ್ನು ಕಿತ್ತೊಗೆಯಲು ಮತ್ತು ಅವರಿಗೆ ಸಂದಾಯವಾಗುತ್ತಿರುವ ಹಣಕಾಸಿನ ಬೆಂಬಲ ಮತ್ತು ಮೂಲಸೌಕರ್ಯ ನೆರವನ್ನು ಸಂಪೂರ್ಣವಾಗಿ ನಿಲ್ಲಿಸುವ ಸಲುವಾಗಿ ಕಾರ್ಯಾಚಾರಣೆ ಪ್ರಾರಂಭ ಮಾಡಿದ್ದೇವೆ. ಗ್ಯಾಂಗ್ಸ್ಟರ್ಗಳು-ಉಗ್ರರು ಒಟ್ಟಾಗಿ ಉದ್ದೇಶಿತ ಹತ್ಯೆಗಳನ್ನು ನಡೆಸುವ ಜತೆ, ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಸಾಗಣೆ ಮೂಲಕ ಹಣವನ್ನೂ ಸಂಗ್ರಹಿಸುತ್ತಿದ್ದುದು ಪ್ರಾಥಮಿಕ ತನಿಖೆಯಲ್ಲೇ ಬೆಳಕಿಗೆ ಬಂದಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Sidhu Moose Wala Murder | ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ 10 ದಿನ ಎನ್‌ಐಎ ಕಸ್ಟಡಿಗೆ