ನವದೆಹಲಿ: ಭಯೋತ್ಪಾದಕರು, ಗ್ಯಾಂಗ್ಸ್ಟರ್ಗಳು ಮತ್ತು ಮಾದಕ ವಸ್ತು ಸಾಗಣೆದಾರರ ನಡುವೆ ಸಂಪರ್ಕ ಏರ್ಪಡುತ್ತಿದೆ ಎಂಬ ಆರೋಪದಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ಪ್ರಾರಂಭಿಸಿದೆ. ಉಗ್ರರು, ಮಾದಕ ವಸ್ತುಗಳ ಕಳ್ಳ ಸಾಗಣೆದಾರರು ಮತ್ತು ದೇಶದೊಳಗಿನ ಗ್ಯಾಂಗ್ಸ್ಟಾರ್ಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ತನಿಖೆಯ ಒಂದು ಭಾಗವಾಗಿ ರಾಷ್ಟ್ರೀಯ ತನಿಖಾ ದಳ ಇಂದು (ಅ.18) ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಶೋಧಕಾರ್ಯ ನಡೆಸಿದೆ. ಪ್ರಮುಖ ಗ್ಯಾಂಗ್ಸ್ಟರ್ಗಳ ನಿವಾಸಗಳು ಸೇರಿ ಸುಮಾರು 50 ಸ್ಥಳಗಳಲ್ಲಿ ಇಂದು ಎನ್‌ಐಎ ರೇಡ್ ನಡೆದಿದೆ.
ದೇಶದ-ವಿದೇಶಗಳಲ್ಲಿರುವ ಕೆಲವು ಅತ್ಯಂತ ಅಪಾಯಕಾರಿ ಗ್ಯಾಂಗ್ಗಳ ಪ್ರಮುಖ ನಾಯಕರು, ಅವರ ಸಹಚರರು ಭಾರತದಲ್ಲಿ ಉಗ್ರ ಮತ್ತು ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಕೇಸ್ ದೆಹಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಆ ಸಂಬಂಧ ದೃಢವಾದ ಮಾಹಿತಿ ಸಿಗುವ ಜತೆಗೆ, ಪೂರಕವಾದ ಸಾಕ್ಷಿಗಳೂ ದೊರೆತ ಹಿನ್ನೆಲೆಯಲ್ಲಿ ಈ ಪ್ರಕರಣ ದೆಹಲಿ ಪೊಲೀಸರಿಂದ ಎನ್ಐಎಗೆ ಹಸ್ತಾಂತರಗೊಂಡಿತ್ತು. ಅದರ ಮೊದಲ ಹಂತವಾಗಿ ಸೆ.12ರಂದು ಎನ್‌ಐಎ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ದೆಹಲಿಗಳಲ್ಲಿ ರೇಡ್ ಮಾಡಿತ್ತು. ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹಂತಕರ ವಿರುದ್ಧವೂ ಹೆಚ್ಚಿನ ತನಿಖೆ ಪ್ರಾರಂಭವಾಗಿದೆ.
‘ಭಾರತದಿಂದ ಓಡಿ ಹೋಗಿ ಪಾಕಿಸ್ತಾನ, ಕೆನಡಾ, ಮಲೇಷಿಯಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ದೊಡ್ಡದೊಡ್ಡ ಗ್ಯಾಂಗ್ಸ್ಟರ್ಗಳು, ಇಲ್ಲಿರುವವರ ಜತೆ ಸೇರಿ ಕ್ರಿಮಿನಲ್, ಉಗ್ರ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಹೇಳಿರುವ ಎನ್‌ಐಎ, ‘ಇಂದಿನ ರೇಡ್ನಲ್ಲಿ ಆರು ಪಿಸ್ತೂಲ್ಗಳು, ಒಂದು ರಿವಾಲ್ವರ್, ಶಾಟ್ಗನ್, ಮಾದಕ ವಸ್ತುಗಳು, ನಗದು, ಡಿಜಿಟಲ್ ಉಪಕರಣಗಳು, ಬೇನಾಮಿ ಆಸ್ತಿ ಇರುವ ಬಗ್ಗೆ ಕಾಗದಪತ್ರಗಳು, ಬೆದರಿಕೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಎನ್‌ಐಎ ಮಾಹಿತಿ ನೀಡಿದೆ.
ಇದನ್ನೂ ಓದಿ:ಎನ್‌ಐಎ, ಪೊಲೀಸ್ ದಾಳಿಗೆ ಅಡ್ಡಿಪಡಿಸಿದ್ದೇ ಬಂಧನಕ್ಕೆ ಕಾರಣ: ಗೃಹ ಸಚಿವ ಆರಗ ಜ್ಞಾನೇಂದ್ರ