ಶ್ರೀನಗರ: ಕಳೆದ ಕೆಲವು ವರ್ಷಗಳಿಂದಲೂ ಟೆರರ್ ಫಂಡಿಂಗ್ ಕೇಸ್ (ಉಗ್ರ ಚಟುವಟಕೆಗಳಿಗೆ ಹಣಕಾಸು ನೆರವು ನೀಡುತ್ತಿರುವವ ವಿರುದ್ಧ ತನಿಖೆ-Terror Funding Case) ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಇಂದು (ಮಾರ್ಚ್ 14) ಮತ್ತೆ ಕಾಶ್ಮೀರದ ಹಲವೆಡೆ ದಾಳಿ ನಡೆಸಿದೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಶಂಕಿತರ ಮನೆಗಳನ್ನು ಎನ್ಐಎ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಕುಲಗಾಂವ್, ಪುಲ್ವಾಮಾ, ಅನಂತ್ನಾಗ್ ಮತ್ತು ಶೋಪಿಯಾನ್ಗಳಲ್ಲಿನ ಶಂಕಿತರ ಮನೆಗಳನ್ನು ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಅದರಲ್ಲೂ ಜಮಾತ್-ಎ-ಇಸ್ಲಾಮಿ ಸಂಘಟನೆಗೆ ಸೇರಿದ ಪ್ರಮುಖರ ಮನೆಗಳಲ್ಲೇ ರೇಡ್ ಆಗುತ್ತಿದೆ. ಹಾಗೇ, ಇನ್ನೊಂದೆಡೆ ಹುರಿಯತ್ ನಾಯಕ ಖಾಜಿ ಯಾಸಿರ್ ಮತ್ತು ಜಮ್ಮು-ಕಾಶ್ಮೀರ ಮುಕ್ತಿ ಚಳವಳಿ ಅಧ್ಯಕ್ಷ ಜಾಫರ್ ಭಟ್ ಮನೆಯನ್ನು ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಅಂದಹಾಗೇ, ಎನ್ಐಎ ಅಧಿಕಾರಿಗಳು, ಸದ್ಯ ಶೋಪಿಯಾನ್ನ ವಾಚಿ ಏರಿಯಾದಲ್ಲಿ, ಪುಲ್ವಾಮಾ ಜಿಲ್ಲೆಯ ನೇಹಾಮಾ ಮತ್ತು ಲಿಟ್ಟರ್ ಏರಿಯಾದಲ್ಲಿ, ಕುಲಗಾಂವ್ನ ಫ್ರೆಸಲ್ ಹಾಗೂ, ಅನಂತ್ನಾಗ್ ಜಿಲ್ಲೆಯ ಅಚ್ವಾಲಾ ಏರಿಯಾದಲ್ಲಿ ರೇಡ್ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸೋಮವಾರ್ ಎನ್ಐಎ ಅಧಿಕಾರಿಗಳ ತಂಡ ಐಸಿಸ್ ಕೇರಳ ಘಟಕದ ಕೇಸ್ನಡಿ ಶ್ರೀನಗರದಲ್ಲಿ ರೇಡ್ ಮಾಡಿತ್ತು. ಟೆರರ್ ಮಾಡ್ಯೂಲ್ನಲ್ಲಿದ್ದ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು.