ಚೆನ್ನೈ: ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರ್ನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟ ಭಯೋತ್ಪಾದನಾ ಕೃತ್ಯ ಎಂದು ಖಚಿತವಾಗಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ. ಕೊಯಮತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೆನ್ನೈ ಸೇರಿ ಸುಮಾರು 45 ಪ್ರದೇಶಗಳಲ್ಲಿ ಎನ್ಐಎ ರೇಡ್ ಮಾಡಿದೆ. ಹಲವು ಅನುಮಾನಾಸ್ಪದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚೆನ್ನೈನಲ್ಲೇ ಐದು ಪ್ರದೇಶಗಳಲ್ಲಿ (ಪುಡುಪೇಟ್, ಮನ್ನಾಡಿ, ಜಮಾಲಿಯಾ ಮತ್ತು ಪೆರಂಬೂರ್) ರೇಡ್ ಆಗಿದೆ. ಅದರ ಹೊರತಾಗಿ ಕೊಯಮತ್ತೂರಿನಲ್ಲಿ ಕೊಟ್ಟಮೇಡು, ಉಕ್ಕಡಂ ಮತ್ತು ಪೊನ್ವಿಜ ನಗರ ಸೇರಿ 21 ಪ್ರಮುಖ ಪ್ರದೇಶಗಳಲ್ಲಿ ಎನ್ಐಎ ಶೋಧ ನಡೆಸಿದೆ.
ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರಿನ ಕೊಟ್ಟಾಮೇಡು ಸಂಗಮೇಶ್ವರ ದೇವಸ್ಥಾನದ ಸಮೀಪ ಮಾರುತಿ 800 ಕಾರೊಂದರಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು. ಸ್ಫೋಟದ ನಂತರ ಕಾರಿನ ಚಾಲಕ ಜಮೇಶಾ ಮುಬಿನ್ ಮೃತದೇಹ ಅದೇ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿ ಪತ್ತೆಯಾಗಿತ್ತು. ಈತನ ಮನೆಯನ್ನು ಶೋಧ ಮಾಡಿದಾಗ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದವು. ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರ ಇದೊಂದು ಉಗ್ರಕೃತ್ಯ ಎಂದು ತೀರ್ಮಾನಕ್ಕೆ ಬರಲಾಗಿದೆ. ಅದೇ ಆಯಾಮದಲ್ಲಿ ತನಿಖೆ ತೀವ್ರಗೊಂಡಿದೆ.
ಇದನ್ನೂ ಓದಿ:Coimbatore Blast | ಯುಎಪಿಎ ಕಾಯ್ದೆಯಡಿ ಕೊಯಮತ್ತೂರು ಸ್ಫೋಟ ತನಿಖೆ, ಯಾಕೆ ಈ ನಿರ್ಧಾರ?