ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸಿದ ರಾಮೇಶ್ವರಂ ಕೆಫೆ (Rameshwarm Cafe) ಸ್ಫೋಟ ಪ್ರಕರಣದ (Blast In Bangalore) ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಳ್ಳಲಿದೆ. ವೈಟ್ಫೀಲ್ಡ್ನ ಜನಪ್ರಿಯ ಉಪಾಹಾರ ಗೃಹದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟದ ಬಗ್ಗೆ ಬೆಂಗಳೂರು ಪೊಲೀಸರು ಮತ್ತು ಕೇಂದ್ರ ಅಪರಾಧ ವಿಭಾಗ ತನಿಖೆ ನಡೆಸುತ್ತಿದ್ದು, ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಇದೀಗ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎನ್ಐಎಗೆ ಹೇಳಿದೆ.
ಗೃಹ ಸಚಿವಾಲಯ (MHI) ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದೆ ಮತ್ತು ಅಧಿಕಾರಿಗಳು ಸೋಮವಾರದಿಂದ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಘಟನೆಯಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದು, ಎಲ್ಲರೂ ಪ್ರಸ್ತುತ ನಾನಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಚಿಕಿತ್ಸೆಯನ್ನು ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ ಎಂದು ಕರ್ನಾಟಕ ಸರ್ಕಾರ ಈಗಾಗಲೇ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸ್ಫೋಟದ ಸ್ಥಳವನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿಯಾದರು. ಅವರು ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಶಂಕಿತನನ್ನು 28 ರಿಂದ 30 ವರ್ಷದವ ಎಂದು ಗುರುತಿಸಲಾಗಿದೆ. ಆತ ಊಟದ ಸಮಯದಲ್ಲಿ ಕೆಫೆಗೆ ಬಂದು ರವಾ ಇಡ್ಲಿಗಾಗಿ ಕೂಪನ್ ಖರೀದಿಸಿದ್ದ. ಆದರೆ ಇಡ್ಲಿ ತಿನ್ನದೆ ಕೆಫೆಯಿಂದ ಹೊರಟಿದ್ದ. ಬೆಂಗಳೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.
ರಾಮೇಶ್ವರಂ ಕೆಫೆಯ ಸಹ ಸಂಸ್ಥಾಪಕ ಮತ್ತು ಸಿಇಒ ರಾಘವೇಂದ್ರ ರಾವ್ ಮಾತನಾಡಿ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಬಾಂಬ್ ಸ್ಫೋಟದ ಬಗ್ಗೆ ಸತ್ಯವನ್ನು ಮರೆಮಾಚಲಾಗುತ್ತಿದೆ ಎಂದು ಹೇಳಿವೆ. ಭಾನುವಾರ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, “ರಾಮೇಶ್ವರಂ ಕೆಫೆ ಘಟನೆಯಲ್ಲಿ ಕಾಂಗ್ರೆಸ್ ಸರ್ಕಾರ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಅಪರಾಧಿಗಳ ಬಗ್ಗೆ ಒಂದೇ ಒಂದು ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಲಿಲ್ಲ. ಅವರು ಎಫ್ಎಸ್ಎಲ್ ವರದಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ” ಎಂದು ಅವರು ಹೇಳಿದ್ದಾರೆ.
ಯುವಕನ ಪ್ರಾಣ ಉಳಿಸಿದ ತಾಯಿಯ ಕರೆ
ಬೆಂಗಳೂರು: ನಗರದ ವೈಟ್‌ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ (Blast in Bangalore) 9 ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಘಟನೆ ಸಂದರ್ಭದಲ್ಲಿ ಯುವಕನೊಬ್ಬ ತನ್ನ ತಾಯಿಯ ಮೊಬೈಲ್ ಕರೆಯಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಟೋಪಿವಾಲಾ 50 ಗಂಟೆ ಕಳೆದರೂ ಸಿಕ್ಕಿಲ್ಲ!
ಬಿಹಾರದ ಪಾಟ್ನಾ ಮೂಲದ 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಕುಮಾರ್ ಅಲಂಕೃತ್ ಅಪಾಯದಿಂದ ಪಾರಾದ ಯುವಕ. ಈತ ಶುಕ್ರವಾರ ಮಧ್ಯಾಹ್ನ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆ ಹೋಗಿದ್ದ. ಎಂದಿನಂತೆ ದೋಸೆ ತೆಗೆದುಕೊಂಡು ಇನ್ನೇನು ತಿನ್ನಲು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಆತನ ಮೊಬೈಲ್‌ಗೆ ತಾಯಿ ಕರೆ ಮಾಡಿದ್ದಾರೆ. ಹೀಗಾಗಿ ತಾಯಿಯೊಂದಿಗೆ ಮಾತನಾಡಲು ಯುವಕ, ಅಲ್ಲಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಪ್ರಶಾಂತವಾದ ಪ್ರದೇಶಕ್ಕೆ ಹೋಗಿದ್ದಾನೆ. ಅಷ್ಟರಲ್ಲೇ ಆತ ಕುಳಿತು ಊಟ ಮಾಡಬೇಕೆಂದುಕೊಂಡಿದ್ದ ಜಾಗದಲ್ಲೇ ಸ್ಫೋಟ ಸಂಭವಿಸಿದೆ. ಹೀಗಾಗಿ ಯುವಕ ಅಪಾಯದಿಂದ ಪಾರಾಗಿದ್ದಾನೆ.
ಈ ಬಗ್ಗೆ ಅಲಂಕೃತ್ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿದ್ದು, ತಮಗಾದ ಕರಾಳ ಅನುಭವವನ್ನು ಮತ್ತು ತನ್ನ ಜೀವ ಉಳಿಸಿದ ತಾಯಿ ಕರೆಯನ್ನು ನೆನಪಿಸಿಕೊಂಡಿದ್ದಾರೆ. ಟ್ವೀಟ್‌ನಲ್ಲಿ ಅಮ್ಮನೇ ದೇವರು ಎಂದು ಬರೆದುಕೊಂಡಿರುವ ಯುವಕ, ಆ ಒಂದು ಕರೆ ಬಾರದೇ ಹೋಗಿದ್ದರೆ ಇಂದು ಹೇಗೆ ಬದುಕುಳಿದೆ ಎಂದು ಸುದ್ದಿಯಾಗಿರುವ ಅಲಂಕೃತ್, ಬೇರೆಯೇ ರೀತಿಯಲ್ಲಿ ಸುದ್ದಿಯಾಗಿರುತ್ತಿದ್ದರು ಎಂದು ತಿಳಿಸಿದ್ದಾರೆ.