ನವ ದೆಹಲಿ: ಬಿಜೆಪಿಯಲ್ಲಿ ಸಾಂಸ್ಥಿಕವಾಗಿ ಕೆಲವು ಮಾರ್ಪಾಡು ಮಾಡಲಾಗಿದೆ. ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ (BJP parliamentary board) ಮತ್ತು ಚುನಾವಣಾ ಸಮಿತಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದೆ. ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ, ಕರ್ನಾಟಕ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪನವರನ್ನು ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ಎರಡಕ್ಕೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ಇಕ್ಬಾಲ್ ಸಿಂಗ್ ಲಾಲ್ಪುರಾ (ಪಂಜಾಬ್), ಸತ್ಯನಾರಾಯಣ ಜಟಿಯಾ (ಮಧ್ಯಪ್ರದೇಶ) ಮತ್ತು ಕೆ. ಲಕ್ಷ್ಮಣ್ (ತೆಲಂಗಾಣ), ಅಸ್ಸಾಂನ ಹಿರಿಯ ನಾಯಕ ಸರ್ವಾನಂದ್ ಸೋನೋವಾಲಾ, ಹರ್ಯಾಣಾದ ಸುಧಾ ಯಾದವ್ಗೂ 2 ಕಡೆ ಸ್ಥಾನ ಸಿಕ್ಕಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಪಕ್ಷದ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯನ್ನು ಮರುರಚನೆ ಮಾಡಿ, ಹೊಸದಾಗಿ ಸೇರ್ಪಡೆಯಾದವರ ಹೆಸರು ಮತ್ತು ಸದಸ್ಯ ಸ್ಥಾನ ಕಳೆದುಕೊಂಡವರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಎರಡಕ್ಕೂ ಜೆ.ಪಿ. ನಡ್ಡಾ ಅಧ್ಯಕ್ಷರಾಗಿರುತ್ತಾರೆ. ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಇರುತ್ತಾರೆ. ಚುನಾವಣಾ ಸಮಿತಿಯಲ್ಲಿ ಹೊಸದಾಗಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ರಾಜಸ್ಥಾನದ ಭೂಪೇಂದ್ರ ಯಾದವ್ ಮತ್ತು ಓಂ ಮಾಥೂರ್ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಮಹತ್ವದ ಸ್ಥಾನ