Site icon Vistara News

ನವ ಭಾರತದ ಹೊಸ ಪಿತಾಮಹ ದೇಶಕ್ಕಾಗಿ ಏನು ಮಾಡಿದ್ದಾರೆ?-ಅಮೃತಾ ಫಡ್ನವೀಸ್​ಗೆ ನಿತೀಶ್​ ಕುಮಾರ್​ ತಿರುಗೇಟು

OBC Reservation

ಪಟನಾ: ‘ನವ ಭಾರತದ ಹೊಸ ಪಿತಾಮಹ ಈ ರಾಷ್ಟ್ರಕ್ಕಾಗಿ ಏನು ಒಳಿತು ಮಾಡಿದ್ದಾರೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೊಂಕು ನುಡಿದಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಪತ್ನಿ ಅಮೃತಾ ಫಡ್ನವೀಸ್​ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಮೃತಾ ಫಡ್ನವೀಸ್ ಅವರು ಕಳೆದ ವಾರ ನಾಗ್ಪುರದಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದರು. ‘ಭಾರತಕ್ಕೆ ಇಬ್ಬರು ಪಿತಾಮಹರು ಇದ್ದಾರೆ ಎಂದು ನನಗೆ ಅನ್ನಿಸುತ್ತದೆ. ಮಹಾತ್ಮ ಗಾಂಧಿಯವರು ಹಿಂದಿನ ಭಾರತದ ಪಿತಾಮಹ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನವ ಭಾರತದ ಪಿತಾಮಹ’ ಎಂದು ಹೇಳಿದ್ದರು. ಅಮೃತಾ ಫಡ್ನವೀಸ್​ ಈ ಹೇಳಿಕೆ ವಿರುದ್ಧ ನಿತೀಶ್ ಕುಮಾರ್ ಸೇರಿ ಹಲವು ಪ್ರತಿಪಕ್ಷಗಳ ನಾಯಕರು ತಿರುಗಿಬಿದ್ದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತೀಶ್​ ಕುಮಾರ್​ ‘ಇವರೇನು ಮಹತ್ಕಾರ್ಯ ಮಾಡಿದ್ದಾರೆ ಎಂದು ಹೀಗೆ ಹೊಸ ರಾಷ್ಟ್ರದ ಪಿತಾಮಹ ಎಂದು ಕರೆಯಲಾಗುತ್ತಿದೆ. ತಾನು ಭಾರತಕ್ಕೆ ಏನು ಒಳಿತು ಮಾಡಿದೆ ಎಂದು ನವಭಾರತದ ಆ ಪಿತಾಮಹನೇ ಹೇಳಬೇಕು. ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು ಬಿಟ್ಟರೆ ಇನ್ಯಾವ ಒಳ್ಳೆಯ ಕೆಲಸವಾಗಿದೆ?, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರಾ? ಸ್ವಾತಂತ್ರ್ಯ ಹೋರಾಟಕ್ಕೆ ಆರ್​ಎಸ್​ಎಸ್​ ಏನೂ ಕೊಡಲಿಲ್ಲ. ಪಾರದರ್ಶಕವಾಗಿ ಕೆಲಸ ಮಾಡಬೇಕಿದ್ದ ಮಾಧ್ಯಮಗಳಿಗೂ ಸ್ವಾತಂತ್ರ್ಯ ಇಲ್ಲದಂತಾಗಿದೆ. ಹೀಗೆಲ್ಲ ಇರುವಾಗ ಅದು ಹೇಗೆ ರಾಷ್ಟ್ರದ ಪಿತಾಮಹ ಎಂದು ಕರೆಸಿಕೊಳ್ಳುತ್ತಾರೆ’ ಎಂದು ನಿತೀಶ್​ ಕುಮಾರ್​ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಸೇನೆ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್​ ರಾವತ್​ ಕೂಡ ಅಮೃತಾ ಫಡ್ನವೀಸ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಪ್ರಧಾನಿ ಮೋದಿಯವರನ್ನು ನವ ಭಾರತದ ಪಿತಾಮಹ ಎಂದು ಅಮೃತಾ ಅವರು ಕರೆದಿದ್ದು ನಿಮಗಾದರೂ ಸಮಂಜಸ ಎನ್ನಿಸುತ್ತಿದೆಯೇ’ ಎಂದು ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ. ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಇದೇ ವಿಷಯ ಪ್ರಸ್ತಾಪ ಮಾಡಿದರ ಅವರು ‘ಇದು ನವಭಾರತವಂತೆ. ಇಲ್ಲಿ ಹಸಿವು, ಬಡತನ, ನಿರುದ್ಯೋಗ, ಭಯೋತ್ಪಾದನೆಗಳೆಂಬ ಭೂತಗಳು ತಲೆ ಎತ್ತಿನಿಂತಿವೆ. ಪ್ರಧಾನಿ ಮೋದಿಯನ್ನು ಈ ನವ ಭಾರತದ ಪಿತಾಮಹ ಎಂದು ಕರೆದರೆ, ಅದು ಮೋದಿಯವರನ್ನೇ ಅವಮಾನಿಸಿದಂತೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಅಲ್ಲ ಎನ್ನುತ್ತಲೇ ಬಹುದೊಡ್ಡ ಭರವಸೆಯೊಂದನ್ನು ನೀಡಿದ ನಿತೀಶ್ ಕುಮಾರ್​ !

Exit mobile version