Site icon Vistara News

ವಿಷ್ಣುಪಾದ ದೇಗುಲದ ಶತಮಾನಗಳ ಸಂಪ್ರದಾಯ ಮುರಿದ ಸಿಎಂ ನಿತೀಶ್​ ಕುಮಾರ್​; ಬಿಜೆಪಿ ಆಕ್ರೋಶ

Nitish Kumar enters Vishnupad temple With Muslim Minister

ಪಟನಾ: ಬಿಜೆಪಿಯಿಂದ ಮೈತ್ರಿ ಕಡಿದುಕೊಂಡು, ಆರ್​ಜೆಡಿ-ಕಾಂಗ್ರೆಸ್​​ ಜತೆ ಸೇರಿ ಮಹಾ ಘಟ್​ ಬಂಧನ್​ ಸರ್ಕಾರ ರಚನೆ ಮಾಡಿ, ಬಿಹಾರದಲ್ಲಿ 8ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ನಿತೀಶ್​ ಕುಮಾರ್​ (Nitish Kumar) ವಿರುದ್ಧ ಬಿಜೆಪಿ ನಿರಂತರವಾಗಿ, ಒಂದಲ್ಲ ಒಂದು ವಿಷಯಕ್ಕೆ ವಾಗ್ದಾಳಿ ನಡೆಸುತ್ತಿದೆ. ಇದೀಗ ನಿತೀಶ್​ ಕುಮಾರ್​ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಸಚಿವರೊಬ್ಬರನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದು, ಅದನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ನಿತೀಶ್​ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ನಿತೀಶ್​ ಕುಮಾರ್​ ಅವರು ತಮ್ಮ ಸಂಪುಟದ ಐಟಿ ಸಚಿವ ಮೊಹಮ್ಮದ್ ಇಸ್ರೈಲ್​ ಮನ್ಸೂರಿ ಜತೆ ಗಯಾದಲ್ಲಿರುವ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಅದೇ ಈಗ ವಿವಾದಕ್ಕೆ ಕಾರಣವಾಗಿದೆ. ‘ಈ ವಿಷ್ಣುಪಾದ ದೇಗುಲಕ್ಕೆ ಹಿಂದುಯೇತರರಿಗೆ ಪ್ರವೇಶ ಇಲ್ಲ. ಕಳೆದ 100 ವರ್ಷಗಳಿಂದಲೂ ಇದೇ ನಿಯಮವಿದೆ. ಅದನ್ನು ದೊಡ್ಡದಾಗಿ ಬರೆದು ದೇವಸ್ಥಾನದ ಬಾಗಿಲಲ್ಲೇ ಬೋರ್ಡ್​ ಕೂಡ ಹಾಕಲಾಗಿದೆ. ಹಾಗಿದ್ದಾಗ್ಯೂ ನಿತೀಶ್​ ಕುಮಾರ್​ ಅವರು ಮೊಹಮ್ಮದ್​ ಇಸ್ರೈಲ್​ರನ್ನು ಜತೆಗೆ ಕರೆದುಕೊಂಡು ಹೋಗಿ, ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. ಗರ್ಭಗುಡಿಗೂ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ‘

ಈ ಫೋಟೋಗಳೆಲ್ಲ ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ವಿಷ್ಣುಪಾದ ದೇವಸ್ಥಾನಕ್ಕೆ ಹಿಂದುಯೇತರರು ಪ್ರವೇಶ ಮಾಡಬಾರದು ಎಂಬ ನಿಯಮ ಇರುವುದು ಗೊತ್ತಿದ್ದೂ ನಿತೀಶ್​ ಕುಮಾರ್​ ಅಪರಾಧ ಮಾಡಿದ್ದಾರೆ. ಗರ್ಭಗುಡಿಗೂ ಮನ್ಸೂರಿಯವರನ್ನು ಕರೆದುಕೊಂಡು ಹೋಗಿದ್ದಾರೆ. ಇದೊಂದು ಪಿತೂರಿ. ಅವರು ಕೂಡಲೇ ಹಿಂದೂಗಳ ಕ್ಷಮೆ ಕೋರಬೇಕು ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಎಸ್​.ಜೈಸ್ವಾಲ್​ ಆಗ್ರಹಿಸಿದ್ದಾರೆ.

ನಿತೀಶ್​ ಕುಮಾರ್​ ತಮ್ಮೊಂದಿಗೆ ಮೊಹಮ್ಮದ್ ಇಸ್ರೈಲ್​ ಮನ್ಸೂರಿಯವರನ್ನು ಕರೆದುಕೊಂಡು ವಿಷ್ಣುಪಾದ ದೇವಸ್ಥಾಕ್ಕೆ ಹೋಗಿದ್ದು, ದೇಗುಲ ನಿರ್ವಹಣಾ ಸಮಿತಿಯ ಆಕ್ರೋಶಕ್ಕೂ ಕಾರಣವಾಗಿದೆ. ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಶಂಭುಲಾಲ್ ಬಿಟ್ಟಲ್​​ ಮಾತನಾಡಿ ‘ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರೊಂದಿಗೆ ಹಿಂದುಯೇತರ ವ್ಯಕ್ತಿಯೊಬ್ಬ ದೇಗುಲ ಪ್ರವೇಶಿಸಿದ್ದು ನಮ್ಮ ಗಮನಕ್ಕೆ ಬಾರದೆ ಹೋಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನ್ಸೂರಿಯನ್ನು ನಮಗೆ ಗುರುತಿಸಲು ಸಾಧ್ಯವಾಗಿಲ್ಲ. ತಿಳಿವಳಿಕೆ ಇದ್ದವರು ತಡೆಯಬೇಕಿತ್ತು. ಹಿಂದುಯೇತರ ವ್ಯಕ್ತಿಯೊಬ್ಬ ದೇವಸ್ಥಾನ ಪ್ರವೇಶ ಮಾಡಿದ್ದು ಸಮಿತಿಯವರಿಗೂ ಕ್ರೋಧ ತಂದಿದೆ. ಈ ಹಿಂದೆಯೂ ಕೂಡ ಹಲವು ಗಣ್ಯರು, ಸಚಿವರು ಇಲ್ಲಿಗೆ ಬಂದಿದ್ದಾರೆ. ಆದರೆ ಮುಸ್ಲಿಮರಾಗಲೀ, ಕ್ರಿಶ್ಚಿಯನ್ನರಾಗಲೀ ದೇವಸ್ಥಾನ ಪ್ರವೇಶಿಸಿರಲಿಲ್ಲ ಎಂದೂ ಬಿಟ್ಟಲ್​​ ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ನಿತೀಶ್​ ಕುಮಾರ್​ ವಿದೇಶಿ ಮಹಿಳೆ ಇದ್ದಂತೆ; ವಿವಾದ ಸೃಷ್ಟಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ !

Exit mobile version