Site icon Vistara News

ರಾಹುಲ್​ ಗಾಂಧಿ ಭೇಟಿ ಮಾಡಿದ ನಿತೀಶ್​ ಕುಮಾರ್​; ಲೋಕಸಭೆ ಚುನಾವಣೆ ಪೂರ್ವ ಒಗ್ಗಟ್ಟಿನ ಮಂತ್ರ

Rahul Gandhi

ನವ ದೆಹಲಿ: ಬಿಜೆಪಿ ಮೈತ್ರಿ ಕಡಿದುಕೊಂಡಿರುವ ಜೆಡಿಯು ನಾಯಕ ನಿತೀಶ್​ ಕುಮಾರ್​ ಇದೀಗ ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ದೆಹಲಿಗೆ ತೆರಳಿರುವ ಅವರು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯನ್ನು ಈಗಾಗಲೇ ಭೇಟಿ ಮಾಡಿ , ಮಾತುಕತೆ ನಡೆಸಿದ್ದಾರೆ. ಹಾಗೇ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಶರದ್​ ಪವಾರ್​​ರನ್ನು ಕೂಡ ಭೇಟಿಯಾಗಲಿದ್ದಾರೆ. ರಾಹುಲ್ ಗಾಂಧಿಯವರ ತುಘಲಕ್​ ರಸ್ತೆಯಲ್ಲಿರುವ ನಿವಾಸದಲ್ಲಿ ಇವರಿಬ್ಬರ ಭೇಟಿಯಾಗಿದ್ದು, 2024ರ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ರಾಹುಲ್​ ಗಾಂಧಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿತೀಶ್​ ಕುಮಾರ್​ ‘ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಅದಾಗಲು ಬಿಡಬಾರದು ಎಂಬುದು ನಮ್ಮ ಉದ್ದೇಶ. ಮುಂದಿನ ಲೋಕಸಭೆ ಚುನಾವಣೆ ಒಳಗೆ ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು. ಅಷ್ಟೇ ಅಲ್ಲ, ‘ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಅಲ್ಲ, ಆ ಬಗ್ಗೆ ಆಸೆ ಕೂಡ ಇಲ್ಲ’ ಎಂದು ಮತ್ತೆ ಸ್ಪಷ್ಟಪಡಿಸಿದರು.

ಈ ಬಾರಿ ಪ್ರಧಾನಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟೇ ನಿತೀಶ್​ ಕುಮಾರ್​ ಬಿಜೆಪಿ ಮೈತ್ರಿ ಕಳೆದುಕೊಂಡಿದ್ದಾರೆ. ಅವರು ಪ್ರತಿಪಕ್ಷಗಳಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಲು ಬಯಸಿದ್ದಾರೆ. ಹಾಗಾಗಿ ಈಗಿನಿಂದಲೇ ಅವರು ವಿಪಕ್ಷಗಳ ನಾಯಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರಿದನ್ನು ಒಪ್ಪುತ್ತಿಲ್ಲ. ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: ದಿಲ್ಲಿಯಲ್ಲಿ ಕುಮಾರಸ್ವಾಮಿ-ನಿತೀಶ್‌ ಕುಮಾರ್‌ ಭೇಟಿ: ಮತ್ತೆ ಚಿಗುರಿತು ಜನತಾ ಪರಿವಾರ ಒಗ್ಗೂಡಿಸುವ ಕನಸು

Exit mobile version