ಪಟನಾ: ಬಿಹಾರದಲ್ಲಿ ನೂತನವಾಗಿ ಮಹಾ ಘಟ್ ಬಂಧನ್ ರಚಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ನಿತೀಶ್ ಕುಮಾರ್ ಆಗಸ್ಟ್ 24ರಂದು ಬಹುಮತ ಸಾಬೀತುಪಡಿಸಬೇಕಾಗಿದೆ. ಬಿಜೆಪಿ ಮೈತ್ರಿಯಿಂದ ಹೊರಬಿದ್ದು, ಆರ್ಜೆಡಿ-ಕಾಂಗ್ರೆಸ್ನೊಟ್ಟಿಗೆ ಸೇರಿದ್ದ ನಿತೀಶ್ ಕುಮಾರ್ ತಮಗೆ 164 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಈ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಆಗಸ್ಟ್ 24ರಿಂದ ಪ್ರಾರಂಭವಾಗಲಿದ್ದು, ಅಂದು ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸಬೇಕು.
ಈ ಮಧ್ಯೆ ಬಿಹಾರ ವಿಧಾನಸಭೆ ಸ್ಪೀಕರ್ ಸ್ಥಾನದಿಂದ ಕೆಳಗೆ ಇಳಿಯಲು ನಿರಾಕರಿಸಿದ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಈಗಾಗಲೇ 55 ಶಾಸಕರು ಅವಿಶ್ವಾಸ ಗೊತ್ತುವಳಿ ಮಂಡಿಸಿ, ಸಹಿ ಹಾಕಿದ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಹೀಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಎರಡು ವಾರಗಳ ಬಳಿಕವೇ ಅದನ್ನು ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ. ಆಗಸ್ಟ್ 24ಕ್ಕೆ ಈ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ 2 ವಾರ ಕಳೆಯುತ್ತದೆ ಮತ್ತು ಅಂದು ಸ್ಪೀಕರ್ ಕೂಡ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಅದಾಗದೆ ಇದ್ದರೆ, ಮೊದಲು ಅವರನ್ನು ಸ್ಪೀಕರ್ ಹುದ್ದೆಯಿಂದ ಕೆಳಗಿಳಿಸಿ, ಬೇರೊಬ್ಬ ಸ್ಪೀಕರ್ರನ್ನು ನೇಮಕ ಮಾಡಲಾಗುತ್ತದೆ. ನಂತರ ಮಹಾ ಘಟ್ ಬಂಧನ್ ಸರ್ಕಾರ ಬಹುಮತ ಸಾಬೀತು ಪಡಿಸುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಕಾರಣಕ್ಕೆ ಬಹುಮತ ಸಾಬೀತು ವಿಳಂಬವಾಗಲಿದೆ.
ಬಿಹಾರ 243 ಸದಸ್ಯ ಬಲದ ಸಾಮರ್ಥ್ಯ ಇರುವ ವಿಧಾನಸಭೆ. ಯಾವುದೇ ಪಕ್ಷ ಸರ್ಕಾರ ರಚನೆ ಮಾಡಬೇಕು ಎಂದರೆ 122 ಶಾಸಕ ಬಲ ಬೇಕು. ಇದೀಗ ಜೆಡಿಯು-ಆರ್ಜೆಡಿ-ಕಾಂಗ್ರೆಸ್ ಮೈತ್ರಿಯ ಮಹಾ ಘಟ್ ಬಂಧನಕ್ಕೆ 163 ಶಾಸಕರ ಬಲ ಇದೆ ಎಂದೇ ಹೇಳಲಾಗಿದೆ. ಆಗಸ್ಟ್ 9ರಂದು ಬಿಜೆಪಿ ಜತೆ ಮೈತ್ರಿಯನ್ನು ಅಧಿಕೃತವಾಗಿ ಮುರಿದುಕೊಂಡ ನಿತೀಶ್ ಕುಮಾರ್, ಆಗಸ್ಟ್ 10ರಂದು ಆರ್ಜೆಡಿ ಮತ್ತು ಕಾಂಗ್ರೆಸ್ ಜತೆಗೆ ಸೇರಿ ಸರ್ಕಾರ ರಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯೂ ಆಗಬೇಕಿದೆ.
ಇದನ್ನೂ ಓದಿ: ನಿರ್ಜನ ಪ್ರದೇಶದಲ್ಲಿ Mobile ಲೂಟಿ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್, 78 ಲಕ್ಷ ಮೌಲ್ಯದ 515 ಮೊಬೈಲ್‌ಗಳು ವಶಕ್ಕೆ