ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ರಾಜ್ಯದ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಇಬ್ಬರೂ ಬಂಧಿತರಾಗಿದ್ದಾರೆ. ಅದರಲ್ಲಿ ಅರ್ಪಿತಾ ಮುಖರ್ಜಿಯನ್ನು ಇ ಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪಾರ್ಥ ಚಟರ್ಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇ ಡಿ ಅಧಿಕಾರಿಗಳಿಂದ ನಿರಂತರವಾಗಿ ವಿಚಾರಣೆಗೆ ಒಳಪಟ್ಟಿರುವ ಅರ್ಪಿತಾ ಮುಖರ್ಜಿ ಎಲ್ಲ ತಪ್ಪನ್ನೂ ಪಾರ್ಥ ಮೇಲೆ ಹೊರಿಸುತ್ತಿದ್ದಾರೆ. ʼನನ್ನದೇನೂ ತಪ್ಪಿಲ್ಲ, ನನ್ನ ಮನೆಯಲ್ಲಿ ಎಷ್ಟು ಹಣ ಇದೆ ಎಂಬುದೂ ನನಗೆ ಗೊತ್ತಿರಲಿಲ್ಲ. ಎಲ್ಲವೂ ಪಾರ್ಥ ಚಟರ್ಜಿಗೆ ಸೇರಿದ್ದು. ನನ್ನ ಮನೆಯ ಹಲವು ರೂಮುಗಳಿಗೆ, ಅದರಲ್ಲೂ ಹಣವಿರುವ ಕೋಣೆಗಳಿಗೆ ನನಗೆ ಪ್ರವೇಶವೇ ಇರಲಿಲ್ಲʼ ಎಂದು ಇ ಡಿ ಅಧಿಕಾರಿಗಳ ಎದುರು ಹೇಳಿದ್ದಾರೆ.
ಅರ್ಪಿತಾ ಮುಖರ್ಜಿ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ದಕ್ಷಿಣ ಕೋಲ್ಕತ್ತದಲ್ಲಿರುವ ಮನೆಯಿಂದ 21 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದ ಇ ಡಿ ಅಧಿಕಾರಿಗಳು, ಆಕೆಯ ಬಲ್ಘೇರಿಯಾದ ನಿವಾಸದಿಂದ 28 ಕೋಟಿ ರೂ. ರೇಡ್ ಮಾಡಿದ್ದಾರೆ. ಇದರ ಹೊರತಾಗಿ ಅಪಾರ ಪ್ರಮಾಣದ ಚಿನ್ನಾಭರಣಗಳು, ಆಸ್ತಿಗೆ ಸಂಬಂಧಪಟ್ಟ ಒಂದಷ್ಟು ಕಾಗದಪತ್ರಗಳು ಪತ್ತೆಯಾಗಿವೆ. ಇ ಡಿ ದಾಳಿ ಶುರುವಾದ ದಿನದಿಂದ ಇಲ್ಲಿಯವರೆಗೆ ಅರ್ಪಿತಾ ಮನೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ. ಆದರೆ ಅರ್ಪಿತಾ, ʼಈ ಹಣ ನನ್ನದಲ್ಲವೇ ಅಲ್ಲ, ನನ್ನ ಮನೆಯಲ್ಲಿ ಯಾವ ಕೋಣೆಯಲ್ಲಿ ಎಷ್ಟು ಹಣ ಇಡಲಾಗಿತ್ತು ಎಂಬುದೂ ಗೊತ್ತಿಲ್ಲʼ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ, ʼನನ್ನ ಮನೆಗೆ ಪದೇಪದೆ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕರು ಬರುತ್ತಿದ್ದರು. ಹಣ ತಂದು ಇಲ್ಲಿ ಇಟ್ಟು ಹೋಗುತ್ತಿದ್ದರು. ಆ ಕೋಣೆ ಲಾಕ್ ಆಗಿರುತ್ತಿತ್ತು. ನನಗೆ ನನ್ನ ಮನೆಯಲ್ಲಿ ದುಡ್ಡು ಇದೆ ಎಂಬುದು ಗೊತ್ತು, ಆದರೆ ಲೆಕ್ಕ ಗೊತ್ತಿಲ್ಲʼ ಎಂದಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಪಾರ್ಥ ಚಟರ್ಜಿ ಇ ಡಿ ಅಧಿಕಾರಿಗಳ ವಿಚಾರಣೆಗೆ ಸಿಗುತ್ತಿಲ್ಲ. ಹೀಗಾಗಿ ಅರ್ಪಿತಾರಿಗೆ ನಿರಂತರವಾಗಿ ಇ ಡಿ ಪ್ರಶ್ನೆಗಳನ್ನು ಕೇಳುತ್ತಿದೆ. ಹಾಗೇ ಇವರಿಬ್ಬರಿಗೆ ಸೇರಿದ ಹಲವು ಫ್ಲ್ಯಾಟ್, ಮನೆಗಳ ಮೇಲೆ ದಾಳಿ ನಡೆಸುತ್ತಿದೆ. ಗುರುವಾರ ಇ ಡಿ ಅಧಿಕಾರಿಗಳು ಅರ್ಪಿತಾ ಮುಖರ್ಜಿಯ, ಚಿನಾರ್ ಪಾರ್ಕ್‌ನಲ್ಲಿರುವ ಅಪಾರ್ಟ್‌ಮೆಂಟ್ ಮೇಲೆ ಕೂಡ ರೇಡ್ ಮಾಡಿದ್ದಾರೆ. ಅಲ್ಲಿಯೂ ಹಣ ಸಿಕ್ಕಿದೆ ಎನ್ನಲಾಗಿದೆ. ಆದರೆ ಅಲ್ಲಿ ಸಿಕ್ಕ ದುಡ್ಡಿನ ಮೊತ್ತ ಎಷ್ಟು ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: ಇ ಡಿ ರೇಡ್ ಮಧ್ಯೆ ಕಳ್ಳರ ಕೈಚಳಕ; ತನಿಖಾ ಏಜೆನ್ಸಿ ತಲುಪುವ ಮೊದಲೇ ಪಾರ್ಥ ಚಟರ್ಜಿ ಮನೆಗೆ ಕನ್ನ