Site icon Vistara News

ಬೆಂಗಳೂರಲ್ಲಿ ಮೂಲಸೌಕರ್ಯ ಸರಿಯಾಗಿಲ್ಲೆಂದು ಮತ್ತೊಮ್ಮೆ ಹೇಳಿದ ತೆಲಂಗಾಣ ಸಚಿವ ಕೆಟಿಆರ್‌

KTR

ಹೈದರಾಬಾದ್‌: ʼಮೂಲಸೌಕರ್ಯಗಳ ವಿಚಾರದಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರು ನಡುವೆ ಹೋಲಿಕೆಯೂ ಇಲ್ಲ, ಸ್ಪರ್ಧೆಯೂ ಇಲ್ಲ. ಯಾರೇನೇ ಹೇಳಿದರೂ, ಹೇಗೇ ನೋಡಿದರೂ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಬೆಂಗಳೂರಿಗಿಂತಲೂ ಹೈದರಾಬಾದ್‌ ಸಾವಿರ ಪಾಲು ಅತ್ಯುತ್ತಮವಾಗಿದೆʼ ಎಂದು ತೆಲಂಗಾಣ ಐಟಿ ಸಚಿವ ಕೆಟಿಆರ್‌ (ಕೆ.ಟಿ.ರಾಮರಾವ್‌) ಹೇಳಿದ್ದಾರೆ. ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ʼನಾನು ಕಳೆದ ಎಂಟು ವರ್ಷಗಳಿಂದಲೂ ಐಟಿ ಸಚಿವನಾಗಿದ್ದೇನೆ. ನನ್ನ ಅನುಭವದಲ್ಲಿ ಹೇಳುವುದಾದರೆ, ನಾವು ಯಾವುದೇ ಭಾವಿ ಹೂಡಿಕೆದಾರರನ್ನು ಭೇಟಿಯಾದಾಗಲೂ, ಅವರು ಮೊದಲು ಮಾತನಾಡುವುದೇ ಇಂಡೋನೇಷ್ಯಾ, ಮಲೇಷಿಯಾ, ಥೈಲ್ಯಾಂಡ್‌, ತೈವಾನ್‌ ದೇಶಗಳ ಬಗ್ಗೆ. ಆದರೆ ಭಾರತ ಎಂಬ ವಿಚಾರ ಬಂದಾಗ, ಈ ದೇಶದಲ್ಲಿ ಯಾವ ಪ್ರದೇಶ ಹೂಡಿಕೆಗೆ ಉತ್ತಮ ಎಂಬ ಬಗ್ಗೆ ತುಂಬ ಯೋಚಿಸುತ್ತಾರೆ. ಎಲ್ಲಿ ಹೋಗಬೇಕು ಎಂಬುದಕ್ಕೆ ಅವರಿಗೊಂದು ಸ್ಪಷ್ಟತೆಯೇ ಇಲ್ಲʼ ಎಂದು ಹೇಳಿದರು.

ನಿಮಗೆ ನೆನಪಿರಬಹುದು ಇತ್ತೀಚೆಗೆ ಬೆಂಗಳೂರು ಮೂಲದ ಸ್ಟಾರ್ಟಅಪ್‌ ಸಂಸ್ಥಾಪಕ ರವೀಶ್‌ ನರೇಶ್‌ ಎಂಬುವರು ಟ್ವೀಟ್‌ ಮಾಡಿ, ಬೆಂಗಳೂರಿನಲ್ಲಿ ರಸ್ತೆ ಸೌಲಭ್ಯ ಉತ್ತಮವಾಗಿಲ್ಲ. ಇಲ್ಲಿನ ನವೋದ್ಯಮಗಳಿಂದ ಸರ್ಕಾರಕ್ಕೆ ಬಿಲಿಯನ್‌ ಡಾಲರ್‌ಗಳಷ್ಟು ತೆರಿಗೆ ಪಾವತಿ ಆಗುತ್ತಿದೆ. ಆದರೆ ರಸ್ತೆ, ನೀರು, ವಿದ್ಯುತ್‌ ಸೌಕರ್ಯಗಳು ಅಸಮರ್ಪಕವಾಗಿವೆ ಎಂದಿದ್ದರು. ರವೀಶ್‌ ನರೇಶ್‌ ಟ್ವೀಟ್‌ಗೆ ಇದೇ ಕೆಟಿಆರ್‌ ಪ್ರತಿಕ್ರಿಯೆ ನೀಡಿ, ರವೀಶ್‌ ನರೇಶ್‌ ಅವರೇ ನೀವು ಬೆಂಗಳೂರಿನಿಂದ ಹೈದರಾಬಾದ್‌ಗೆ ಬನ್ನಿ. ಇಲ್ಲಿ ಮೂಲ ಸೌಕರ್ಯ, ವಿಮಾನ ನಿಲ್ದಾಣ ಎಲ್ಲವೂ ಚೆನ್ನಾಗಿದೆ. ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ ಎಂಬ ಮೂರು ಮಂತ್ರಗಳನ್ನು ಆದ್ಯತೆಯಾಗಿಟ್ಟು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಅಂದು ಕೆಟಿಆರ್‌ ಆಡಿದ ಮಾತುಗಳಿಗೆ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌, ರಾಜ್ಯ ಐಟಿ ಸಚಿವ ಅಶ್ವತ್ಥ್‌ ನಾರಾಯಣ್‌ ಕೂಡ ಸಣ್ಣಮಟ್ಟಿಗಿನ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಕೆಟಿಆರ್‌ ಬೆಂಗಳೂರಿನ ಮೂಲ ಸೌಕರ್ಯದ ಬಗ್ಗೆ ಮಾತನಾಡಿದ್ದಾರೆ.

ಹಾಗೇ, ಇಂದಿನ ಪಾಡ್‌ಕಾಸ್ಟ್‌ನಲ್ಲಿ ಹೈದರಾಬಾದ್‌ನ್ನು ಹೊಗಳಿದ ಕೆಟಿಆರ್‌, ʼದೇಶದಲ್ಲಿ ಒಟ್ಟಾರೆ ಉತ್ಪಾದನೆಯಾಗುವ ಔಷಧೀಯ ವಸ್ತುಗಳಲ್ಲಿ ಶೇ.40ರಷ್ಟು ಹೈದರಾಬಾದ್‌ನಲ್ಲೇ ಉತ್ಪಾದನೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದ, ಯುಎಸ್‌ಎಯ ಎಫ್‌ಡಿಎಯಿಂದ ಅನುಮೋದನೆ ಪಡೆದಿರುವ ಔಷಧ ಕಂಪನಿಗಳ ಬಹುತೇಕ ಶಾಖೆಗಳು ಇಲ್ಲಿವೆ. ಹೈದರಾಬಾದ್‌ನಲ್ಲಿ ತಂತ್ರಜ್ಞಾನದಿಂದ ಜೀವಶಾಸ್ತ್ರದವರೆಗೆ ಎಲ್ಲ ಕ್ಷೇತ್ರಗಳೂ ಅಭಿವೃದ್ಧಿಗೊಂಡಿವೆ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ; ಹೈದರಾಬಾದ್‌ ತಲುಪಿದ ಪ್ರಧಾನಿ ಮೋದಿ, ಅಮಿತ್‌ ಶಾ

Exit mobile version