ನವ ದೆಹಲಿ: ದೇಶದೆಲ್ಲೆಡೆ ಜಾತಿ-ಧರ್ಮದ ಕೂಗು ಎದ್ದಿದೆ. ಒಬ್ಬೊಬ್ಬರೂ ಒಂದೊಂದು ಜಾತ್ಯಾಧಾರಿತ ಹೇಳಿಕೆಗಳನ್ನು ನೀಡುತ್ತ, ಅದರ ಬಗ್ಗೆಯೇ ಮಾತುಗಳು, ಹೋರಾಟಗಳು ಹೆಚ್ಚುತ್ತಿರುವ ಈ ಹೊತ್ತಲ್ಲಿ ಜೆಎನ್ಯು (ಜವಾಹರ್ ಲಾಲ್ ನೆಹರೂ ಯೂನಿವರ್ಸಿಟಿ) ಉಪ ಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ (Santishree Dhulipudi Pandit) ಅವರು ಜಾತಿಯನ್ನು ದೇವರಿಗೂ ಅನ್ವಯಿಸಿಬಿಟ್ಟಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆಯ ಬಗ್ಗೆ ಮಾತನಾಡಿದ ಅವರು, ದೇವರ ಜಾತಿ ಯಾವುದು ಎಂಬುದನ್ನು ವಿವರಿಸಿದ್ದಾರೆ.
‘ನಮ್ಮ ದೇವರುಗಳ ಮೂಲವನ್ನು ನಾವು ಮಾನವಶಾಸ್ತ್ರದ ಪ್ರಕಾರ ಅಧ್ಯಯನ ಮಾಡಬೇಕು. ಅದರ ಪ್ರಕಾರ, ಯಾವುದೇ ದೇವರೂ ಬ್ರಾಹ್ಮಣರಲ್ಲ. ಬಹುತೇಕ ಎಲ್ಲರೂ ಕ್ಷತ್ರಿಯರೇ ಆಗಿದ್ದಾರೆ. ಅದರಲ್ಲೂ ಶಿವನಂತೂ ಪರಿಶಿಷ್ಟ ಪಂಗಡದವನೋ, ಪರಿಶಿಷ್ಟ ಜಾತಿಯವನೋ ಆಗಿರಬೇಕು. ಯಾಕೆಂದರೆ ಶಿವ ಸ್ಮಶಾನದಲ್ಲಿ ಕುಳಿತುಕೊಳ್ಳುತ್ತಾನೆ, ಹಾವನ್ನು ಕುತ್ತಿಗೆಗೆ ಸುತ್ತಿಕೊಳ್ಳುತ್ತಾನೆ. ಅತ್ಯಂತ ಕಡಿಮೆ ಬಟ್ಟೆ ಧರಿಸುತ್ತಾನೆ. ಬ್ರಾಹ್ಮಣರು ಯಾವ ಕಾರಣಕ್ಕೂ ಹೀಗೆ ಸ್ಪಶಾನದಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಶಾಂತಿಶ್ರೀ ವಿಶ್ಲೇಷಿಸಿದ್ದಾರೆ. ಹಾಗೇ, ಲಕ್ಷ್ಮೀ, ಶಕ್ತಿ ಅಥವಾ ಜಗನ್ಮಾತೆಯರ್ಯಾರೂ ಬ್ರಾಹ್ಮಣ ಸಮುದಾಯದವರಲ್ಲ. ಜಗನ್ಮಾತೆ ಬುಡಕಟ್ಟು ಜನಾಂಗದವಳು ಎಂದೂ ಅವರೂ ಹೇಳಿದ್ದಾರೆ.
‘ಲಿಂಗ ಸಮಾನತೆ ಕುರಿತು ಡಾ. ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು’ ಎಂಬ ವಿಷಯದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ದಲಿತ ಹುಡುಗನ ಹತ್ಯೆಯನ್ನೂ ಪ್ರಸ್ತಾಪ ಮಾಡಿದರು. ‘ಮನುಸ್ಮೃತಿಯಲ್ಲಿ ಎಲ್ಲ ಮಹಿಳೆಯರಿಗೂ ಶೂದ್ರ ಸ್ಥಾನಮಾನ ನೀಡಲಾಗಿದೆ. ಹಾಗಾಗಿ ಯಾವುದೇ ಮಹಿಳೆ ತಾನು ಬ್ರಾಹ್ಮಣ ಅಥವಾ ಇನ್ಯಾವುದೇ ಜಾತಿಗೆ ಸೇರಿದವಳು ಎಂದು ಹೇಳಿಕೊಳ್ಳುವಂತಿಲ್ಲ. ಮಹಿಳೆಯ ಜಾತಿ ನಿರ್ಧಾರವಾಗುವುದು ಆಕೆಯ ತಂದೆ ಅಥವಾ ಪತಿಯಿಂದ’ ಎಂದೂ ತಿಳಿಸಿದ್ದಾರೆ.
ಆ ದೇವರುಗಳೇ ಯಾರೂ ಮೇಲ್ಜಾತಿಯವರಲ್ಲ ಅಂದ ಮೇಲೆ ಭೂಮಿಯ ಮೇಲೆ ಯಾಕೆ ಇನ್ನೂ ಜಾತಿ ಹೆಸರಿನ ತಾರತಮ್ಯ ನಡೆಯುತ್ತಿದೆ ಅರ್ಥವಾಗುತ್ತಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಾವು ಮರುಚಿಂತನೆ ಮಾಡುವ ಅಗತ್ಯವಿದೆ. ಹಿಂದುತ್ವ ಎಂಬುದು ಒಂದು ಧರ್ಮವಲ್ಲ. ಇದೇ ಜೀವನ..ಇದೇ ನಮ್ಮ ಜೀವನ ಅಂದಮೇಲೆ ನಾವು ಟೀಕೆಗೆ ಯಾಕೆ ಹೆದರಬೇಕು? ಎಂದು ಶಾಂತಿಶ್ರೀ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Dalit Boy Death | ರಾಜಸ್ಥಾನ ಸರ್ಕಾರದ ವಿರುದ್ಧ ಕಾಂಗ್ರೆಸಿಗರ ಬೇಸರ; ಶಾಸಕ, ಕೌನ್ಸಿಲರ್ಗಳ ರಾಜೀನಾಮೆ