ದಿಸ್ಪುರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನಸ್ಸಲ್ಲಿ ಭೇದ-ಭಾವ ಮೂಡಬಾರದು, ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು, ಶಿಸ್ತು ಮೂಡಬೇಕು ಎಂಬ ಕಾರಣದಿಂದಾಗಿ ವಸ್ತ್ರಸಂಹಿತೆ ಜಾರಿಗೊಳಿಸಲಾಗುತ್ತದೆ. ಇದೇ ಸಮವಸ್ತ್ರ ಧರಿಸಿ ಶಾಲೆಗಳಿಗೆ ಬರಬೇಕು ಎಂಬ ನಿಯಮ ಇದೆ. ಆದರೆ, ಅಸ್ಸಾಂನಲ್ಲಿ ಈಗ ಶಿಕ್ಷಕರು ಹಾಗೂ ಶಿಕ್ಷಕಿಯರು ಕೂಡ ಡ್ರೆಸ್‌ಕೋಡ್ ನಿಯಮವನ್ನು ಪಾಲಿಸಬೇಕಾಗಿದೆ. ಅಂದರೆ, ಶಿಕ್ಷಕರು ಹಾಗೂ ಶಿಕ್ಷಕಿಯರು ಜೀನ್ಸ್, ಟಿ-ಶರ್ಟ್ಸ್ ಹಾಗೂ ಲೆಗ್ಗಿಂಗ್ಸ್‌ಗಳನ್ನು ಧರಿಸಿ ಬರುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಅಸ್ಸಾಂ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ, ಶಿಕ್ಷಕಿಯರ ಡ್ರೆಸ್‌ಕೋಡ್ ಕುರಿತು ಅಧಿಸೂಚನೆ ಹೊರಡಿಸಿದೆ. ಇತ್ತೀಚೆಗೆ, ಶಾಲೆಗಳಲ್ಲಿ ಶಿಕ್ಷಕ, ಶಿಕ್ಷಕಿಯರು ಜೀನ್ಸ್, ಟಿ-ಶರ್ಟ್ ಹಾಕಿಕೊಂಡು ಬರುತ್ತಿರುವುದು ಜಾಸ್ತಿಯಾದ ಕಾರಣ ಹಾಗೂ ಈ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಕಾರಣ ಎಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಆದೇಶದಲ್ಲಿ ಏನಿದೆ?
“ಇತ್ತೀಚೆಗೆ ಶಿಕ್ಷಕರು ಹಾಗೂ ಶಿಕ್ಷಕರು ಜೀನ್ಸ್ ಪ್ಯಾಂಟ್, ಟಿ-ಶರ್ಟ್ಸ್, ಲೆಗ್ಗಿಂಗ್ಸ್‌ಗಳನ್ನು ಧರಿಸಿ ಶಾಲೆಗಳಿಗೆ ಆಗಮಿಸುತ್ತಿರುವುದು ಕಂಡುಬಂದಿದೆ. ಶಿಕ್ಷಕರು ಹಾಗೂ ಶಿಕ್ಷಕಿಯರು ಯಾವಾಗಲೂ ಮಕ್ಕಳಿಗೆ ಸಭ್ಯತೆ ಸೇರಿ ಎಲ್ಲ ವಿಷಯದಲ್ಲಿ ಮಾದರಿ ಎನಿಸಬೇಕು. ವೃತ್ತಿಪರತೆ, ಸಭ್ಯತೆ ಹಾಗೂ ಕೆಲಸ ಮಾಡುವ ಸ್ಥಳದ ಗಂಭೀರತೆಯನ್ನು ಅರಿತು ಶಿಕ್ಷಕರು ಇನ್ನು ಮುಂದೆ ಜೀನ್ಸ್, ಟಿ-ಶರ್ಟ್‌ಗಳನ್ನು ಧರಿಸಿ ಬರಬಾರದು” ಎಂದು ಆದೇಶದಲ್ಲಿದೆ.
ಶಿಕ್ಷಕರು ಸಭ್ಯ ಎನಿಸುವ, ಸಾಧಾರಣ ಉಡುಪುಗಳನ್ನು ಧರಿಸಿ ಶಾಲೆಗಳಿಗೆ ಬರಬೇಕು. ಪಾರ್ಟಿ ಸೇರಿ ಯಾವುದೇ ಫಂಕ್ಷನ್‌ಗಳಿಗೆ ಧರಿಸಿ ತೆರಳುವ ಉಡುಪುಗಳನ್ನು ಧರಿಸಿ ಶಾಲೆಗಳಿಗೆ ತೆರಳಬಾರದು. ಬಣ್ಣಗಳಲ್ಲೂ ಸಹ ತೀರಾ ಡಾರ್ಕ್ ಅಥವಾ ಗಾಢ ಎನಿಸುವ ಬಣ್ಣಗಳ ಬಟ್ಟೆಗಳನ್ನು ಧರಿಸಬಾರದು ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಡ್ರೆಸ್‌ಕೋಡ್ ನಿಯಮಗಳನ್ನು ಉಲ್ಲಂಘಿಸುವ ಟೀಚರ್‌ಗಳಿಗೆ ನಿಯಮಗಳ ಅನ್ವಯ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.