ನವ ದೆಹಲಿ: ಚೀನಾ ಸೇರಿ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು (Coronavirus) ಜಾಸ್ತಿಯಾದ ಬೆನ್ನಲ್ಲೇ ಭಾರತದಲ್ಲೂ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ಭಾರತದಲ್ಲಿ ಈಗಾಗಲೇ ಕೊವಿಡ್ 19 ಮೂರನೇ ಡೋಸ್ ತೆಗೆದುಕೊಂಡಾದವರು, ಲಸಿಕೆಯ 4ನೇ ಡೋಸ್ ತೆಗೆದುಕೊಳ್ಳಬೇಕೋ? ಬೇಡವೋ ಎಂಬ ಗೊಂದಲ, ಚರ್ಚೆಯೂ ನಡೆಯುತ್ತಿದೆ. ಆದರೆ ಕೊವಿಡ್ 19 ಲಸಿಕೆ 4ನೇ ಡೋಸ್ (Covid 19 4th Dose) ಅಗತ್ಯವೇ ಇಲ್ಲ ಎನ್ನುತ್ತಿದ್ದಾರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮಾಜಿ ಮುಖ್ಯಸ್ಥ ಡಾ. ರಮಣ್ ಗಂಗಾಖೇಡ್ಕರ್.
ಈಗ ಸದ್ಯ ವಿಶ್ವದ ಹಲವು ದೇಶಗಳನ್ನು ಕಾಡುತ್ತಿರುವುದು ಕೊರೊನಾ ವೈರಸ್ನ ವಿವಿಧ ರೂಪಾಂತರಿಗಳು. ಭಾರತದಲ್ಲಿ ಸದ್ಯದ ಪರಿಸ್ಥಿತಿ ನೋಡಿದರೆ ಇಲ್ಲಿನ ಜನರಿಗೆ ಕೊವಿಡ್ 19 ಲಸಿಕೆಯ 4ನೇ ಡೋಸ್ ಅಗತ್ಯವಿಲ್ಲ ಎಂದು ತೋರುತ್ತದೆ. ಒಬ್ಬ ವ್ಯಕ್ತಿ ಈಗಾಗಲೇ ಮೂರು ಡೋಸ್ ಲಸಿಕೆ ಪಡೆದಿದ್ದಾನೆ ಎಂದರೆ, ಆತನ ಟಿ-ಸೆಲ್ (ಟಿ-ಜೀವಕೋಶ)ಗಳಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಮೂರು ಬಾರಿ ವರ್ಧಕಗೊಂಡಿದೆ ಎಂದು ಅರ್ಥ. ಈಗ ಹಿಂದೆ ಕೊಟ್ಟ ಲಸಿಕೆಯನ್ನೇ ಮತ್ತೊಂದು ಡೋಸ್ ಕೊಟ್ಟರೆ, ಮೂಲ ವೈರಸ್ಗಳು ತಮ್ಮ ರೂಪಾಂತರಿಗಳ ಮೇಲೆ ಲಸಿಕೆ ಪ್ರಭಾವ ಬೀರದಂತೆ ಮಾಡಬಹುದು. ನಮ್ಮ ಟಿ-ಸೆಲ್ಗಳ ಪ್ರತಿರೋಧ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು’ ಎಂದು ಹೇಳಿದರು.
ಇದನ್ನೂ ಓದಿ: China Protest| ಪ್ರತಿಭಟನೆಗೆ ಮಣಿದ ಚೀನಾ ಆಡಳಿತ; ಕೆಲವು ಪ್ರದೇಶಗಳಲ್ಲಿ ಕೊವಿಡ್ 19 ನಿಯಮಗಳ ಸಡಿಲಿಕೆ
ಅಷ್ಟೇ ಅಲ್ಲ, ‘ವಯಸ್ಸಾದವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಕೂಡ ಕೊರೊನಾ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ. ಅದರ ಬದಲು ಎಲ್ಲರೂ ಮುನ್ನೆಚ್ಚರಿಕೆ ಕ್ರಮ ಪಾಲಿಸೋಣ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾರ್ವಜನಿಕ ಸ್ಥಳಗಳಿಗೆ, ಗುಂಪು ಇದ್ದಲ್ಲಿ ಹೋದಾಗ ಜಾಗರೂಕರಾಗಿ ಇರಬೇಕು’ ಎಂದು ಡಾ. ರಮಣ್ ಗಂಗಾಖೇಡ್ಕರ್ ಹೇಳಿದ್ದಾರೆ. ಹಾಗೇ, ‘ಈಗೇನಾದರೂ ಕೊರೊನಾ ಜಾಸ್ತಿಯಾದರೆ, ಯಾವುದೋ ಹೊಸ ತಳಿ ಹೊರಬಂದಿರುತ್ತದೆ. ಇದು ಮೂಲತಃ SARS-COV2 ಗೆ ಸೇರಿದ್ದಾಗಿರುವುದಿಲ್ಲ. ಹಾಗಾಗಿ ಹಳೇ ಲಸಿಕೆ ಕೆಲಸ ಮಾಡುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ. ಹೊಸ ಲಸಿಕೆಯ ಅಗತ್ಯವೇ ಬೀಳಬಹುದು’ ಎಂದೂ ಅವರು ವಿಶ್ಲೇಷಿಸಿದ್ದಾರೆ.