Site icon Vistara News

ರಾಷ್ಟ್ರ ಲಾಂಛನವನ್ನು ಕೆಳಭಾಗದಿಂದ ತೆಗೆದ ಫೋಟೋ ವೈರಲ್‌ ಆಗ್ತಿದೆ; ಶಿಲ್ಪಿ ಸುನಿಲ್‌ ಡಿಯೋರ್‌ ಸ್ಪಷ್ಟನೆ

national emblem

ನವದೆಹಲಿ: ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್‌ ಭವನದ ಮೇಲೆ ಅನಾವರಣಗೊಳಿಸಲಾದ ಭವ್ಯವಾದ ರಾಷ್ಟ್ರಲಾಂಛನದ ಈಗ ವಿವಾದದ ಕೇಂದ್ರಬಿಂದುವಾಗಿದೆ. ಮೂಲ ಲಾಂಛನದಲ್ಲಿ ನಾಲ್ಕೂ ಸಿಂಹಗಳ ಮುಖ ಶಾಂತಸ್ವರೂಪದಲ್ಲಿದ್ದರೆ, ಈಗ ಸಂಸತ್‌ ಭವನದ ಮೇಲೆ ನಿರ್ಮಿಸಲಾದ ಸಿಂಹಗಳು ಘರ್ಜಿಸುತ್ತ, ವ್ಯಘ್ರರೂಪ ತಳೆದಂತಿವೆ ಎಂಬುದು ಆರೋಪ. ಇದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಸಚಿವರು ಈಗಾಗಲೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಮೂಲ ಸಾರಾನಾಥ ಲಾಂಛನದಂತೆಯೇ ಇದೆ ಎಂದೂ ಹೇಳಿದ್ದಾರೆ. ಆದರೂ ಪ್ರತಿಪಕ್ಷಗಳ ಆರೋಪ ನಿಲ್ಲುತ್ತಿಲ್ಲ. ಇದರ ಬೆನ್ನಲ್ಲೇ ಲಾಂಛನ ನಿರ್ಮಿಸಿದ ಶಿಲ್ಪಿ ಪ್ರತಿಕ್ರಿಯೆ ನೀಡಿದ್ದಾರೆ.

9500 ಕೆಜಿ ತೂಕದ ಕಂಚಿನ ಲಾಂಛನವನ್ನು ನಿರ್ಮಿಸಿದ ಶಿಲ್ಪಿ ಸುನಿಲ್‌ ಡಿಯೋರ್‌ ಮಾತನಾಡಿ, ʼನಾವು ಮೂಲ ಸಾರಾನಾಥ ಲಾಂಛನವನ್ನು ಸಮಗ್ರವಾಗಿ, ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಬಳಿಕವೇ ಈ ಲಾಂಛನವನ್ನು ರೂಪಿಸಿದ್ದೇವೆ. ಥೇಟ್‌ ಸಾರಾನಾಥ ಲಾಂಛನದಲ್ಲಿರುವ ಸಿಂಹಗಳಂತೆಯೇ ಇದನ್ನೂ ಕೆತ್ತಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ʼ ಈ ಲಾಂಛನ ನಿರ್ಮಾಣ ವಿಚಾರದಲ್ಲಿ ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಮೂಲ ಲಾಂಛನ ಸ್ವತಃ ಅಧ್ಯಯನ ಮಾಡಿದ್ದೇನೆʼ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಮೂಲ ಲಾಂಛನಕ್ಕೂ, ಸಂಸತ್‌ ಭವನದ ಮೇಲೆ ನಿರ್ಮಾಣವಾಗುತ್ತಿರುವ ಲಾಂಛನಕ್ಕೂ ಯಾವುದೇ ವ್ಯತ್ಯಾಸ ಆಗಬಾರದು ಎಂಬುದನ್ನು ನಾವು ಗಮನದಲ್ಲಿ ಇಟ್ಟುಕೊಂಡು, ಅದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ರೂಪಿಸಿದ್ದೇವೆ. ಸಾರಾನಾಥ ಲಾಂಛನದ ಅಳತೆ, 3-3.5 ಅಡಿ ಎತ್ತರವಿದೆ. ಆದರೆ ನಾವು ಈಗ ನಿರ್ಮಿಸಿದ ಲಾಂಛನ 21.3 ಎತ್ತರ ಇದೆ ಎಂದು ತಿಳಿಸಿದ್ದಾರೆ.

ಕೆಳಗಿಂದ ಫೋಟೋ ತೆಗೆಯಲಾಗಿದೆ
ಲಾಂಛನದ ಫೋಟೋವನ್ನು ವಿವಿಧ ಆಯಾಮಗಳಿಂದ ಸೆರೆ ಹಿಡಿದಾಗ ಬೇರೆಬೇರೆ ಸ್ವರೂಪದಲ್ಲಿ ಗೋಚರಿಸುತ್ತದೆ. ಈಗ ಲಾಂಛನವನ್ನು ಕೆಳಭಾಗದಿಂದ ಫೋಟೋ ತೆಗೆದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ. ಕೆಳಭಾಗದಿಂದ ಸೆರೆ ಹಿಡಿಯಲಾದ ಫೋಟೋದಲ್ಲಿ ಸಹಜವಾಗಿಯೇ ಸಿಂಹಗಳ ಬಾಯಿ ದೊಡ್ಡದಾಗಿ ಕಾಣುತ್ತದೆ ಮತ್ತು ಅವು ವ್ಯಘ್ರ ಸ್ವರೂಪ ತಳೆದಂತೆ ಅನಿಸುತ್ತಿದೆ ಎಂದು ಶಿಲ್ಪಿ ಸುನಿಲ್‌ ಡಿಯೋರ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ʼನನಗೆ ಈ ಲಾಂಛನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನೇರವಾಗಿ ಗುತ್ತಿಗೆ ಕೊಟ್ಟಿಲ್ಲ. ಬದಲಾಗಿ ಟಾಟಾ ಪ್ರಾಜೆಕ್ಟ್‌ ಲಿಮಿಟೆಡ್‌ನಿಂದ ಪಡೆದಿದ್ದೇನೆʼ ಎಂಬುದನ್ನೂ ಅವರು ತಿಳಿಸಿದ್ದಾರೆ.

ಹರ್ದೀಪ್‌ ಸಿಂಗ್‌ ಪುರಿ ಕೂಡ ಇದನ್ನೇ ಹೇಳಿದ್ದರು !
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ನಿನ್ನೆ ಮೂಲ ಮತ್ತು ಈಗಿನ ಲಾಂಛನಗಳ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿ ಇದನ್ನೇ ಹೇಳಿದ್ದರು. ಸಾರಾನಾಥ ಲಾಂಛನದಲ್ಲಿರುವ ಸಿಂಹಗಳನ್ನೂ ಕೆಳಗಿನಿಂದ ನೋಡಿದರೆ ಅಲ್ಲೂ ಕೂಡ ಸಿಂಹ ಘರ್ಜಿಸುತ್ತಿರುವಂತೆಯೇ ಕಾಣುತ್ತದೆ. ಅದೇ, ಸಮಾನಾಂತರವಾಗಿ ನಿಂತು ತೆಗೆದ ಫೋಟೋದಲ್ಲಿ ಸಿಂಹ ಶಾಂತವಾಗಿ ಇರುವಂತೆ ಗೋಚರಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಲಾಂಛನದ ಸಿಂಹಗಳಿಗೆ ಉಗ್ರ ಸ್ವರೂಪ: ಪ್ರತಿಪಕ್ಷದ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?

Exit mobile version