Site icon Vistara News

Pathaan Movie: ಸೆನ್ಸಾರ್ ಬೋರ್ಡ್ ಓಕೆ ಮಾಡಿದೆ, ಇನ್ನು ಪಠಾಣ್ ವಿರುದ್ಧ ಪ್ರತಿಭಟಿಸಿ ಅರ್ಥವಿಲ್ಲ! ಹೀಗೆ ಹೇಳಿದ್ದು ಯಾರು?

No Point In Protesting Against Pathaan movie, says Madhya Pradesh Home Minister Narottam Mishra

ಭೋಪಾಲ್: ಬೇಷರಮ್ ರಂಗ್‌ ಹಾಡಿನಲ್ಲಿನ ಕೇಸರಿ ಬಿಕಿನಿ ಸೀನ್ ತೆಗೆಯದಿದ್ದರೆ ಮಧ್ಯಪ್ರದೇಶದಲ್ಲಿ ಶಾರುಖ್ (Shah Rukh Khan) ಅವರ ಪಠಾಣ್ ಚಿತ್ರ (Pathaan Movie) ಬಿಡುಗಡೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ (Narottam Mishra) ಅವರು ಈಗ ಉಲ್ಟಾ ಹೊಡೆದಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಠಾಣ್ ಸಿನಿಮಾ ಕುರಿತು ಸೆನ್ಸಾರ್ ಮಂಡಳಿ ನಿರ್ಧಾರ ಕೈಗೊಂಡಿರುವುದಿರಂದ ಮತ್ತೆ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.

ಜನವರಿ 25, ಬುಧವಾರ ಪಠಾಣ್ ಸಿನಿಮಾ ಮಧ್ಯ ಪ್ರದೇಶ ಸೇರಿ ದೇಶಾದ್ಯಂತ ಬಿಡುಗಡೆಯಾಗಿದೆ. ಹೀಗಿದ್ದೂ, ಮಧ್ಯಪ್ರದೇಶದ ಕೆಲವು ಕಡೆ ಹಿಂದೂ ಸಂಘಟನೆಗಳು ಪಠಾಣ್ ಸಿನಿಮಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕೆಲವು ಸಿನಿಮಾ ಮಂದಿರಗಳು ಬೆಳಗಿನ ಶೋಗಳನ್ನು ಸ್ಥಗಿತಗೊಳಿಸಬೇಕಾಯಿತು.

ಸಿನಿಮಾದಲ್ಲಿ ಎಲ್ಲ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಸೆನ್ಸಾರ್ ಬೋರ್ಡ್ ಎಲ್ಲ ಸರಿ ಮಾಡಿದೆ. ವಿವಾದಾತ್ಮಕ ಪದಗಳನ್ನು ತೆಗೆದು ಹಾಕಲಾಗಿದೆ. ಹಾಗಾಗಿ, ಈಗ ಪ್ರತಿಭಟನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನರೋತ್ತಮ ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Pathaan Movie: ʻಪಠಾಣ್‌ʼ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಇತ್ತೀಚೆಗಷ್ಟೇ ದಿಲ್ಲಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಿನಿಮಾಗಳು ಮತ್ತು ನಟರ ವಿರುದ್ಧ ಅನಗತ್ಯವಾಗಿ ಟೀಕೆ ಬೇಡ. ಸುಮ್ಮನೆ ಟೀಕಿಸುವುದರಿಂದ ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳು ಬದಿಗೆ ಸರಿದು, ಈ ವಿವಾದಗಳೇ ಮುಖ್ಯವಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಿವಿಮಾತು ಹೇಳಿದ್ದರು. ಈ ಕಾರ್ಯಕಾರಿಣಿಯಲ್ಲಿ ನರೋತ್ತಮ ಮಿಶ್ರಾ ಕೂಡ ಭಾಗವಹಿಸಿದ್ದರು.

Exit mobile version