ದೆಹಲಿಯಲ್ಲಿ ಜನವರಿ 1ರಂದು 20 ವರ್ಷದ ಯುವತಿಯೊಬ್ಬಳು ಕಾರಿನ ಚಕ್ರದಡಿ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಯುವತಿ ಮತ್ತು ಆಕೆಯ ಸ್ನೇಹಿತೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಸುಲ್ತಾನ್ಪುರಿ ಬಳಿ ಕಾರು ಡಿಕ್ಕಿಯಾಗಿತ್ತು. ಹಿಂದೆ ಕುಳಿತಿದ್ದವಳು ಅಲ್ಲಿಂದ ಪಾರಾಗಿ ಹೋಗಿದ್ದರೆ, ಈಕೆ ಕಾರಿನ ಅಡಿಯಲ್ಲಿ ಸಿಲುಕಿ ಎಳೆಯಲ್ಪಟ್ಟಿದ್ದಳು. ಬಳಿಕ ಕಂಝಾವಾಲಾ ಬಳಿ ರಸ್ತೆ ಮೇಲೆ ಸಂಪೂರ್ಣ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದಳು. ಹೀಗಾಗಿ ಆಕೆ ಮೇಲೆ ರೇಪ್ ಆಗಿರಬಹುದು ಎಂಬ ಅನುಮಾನವನ್ನು ಆಮ್ ಆದ್ಮಿ ಪಕ್ಷ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಯುವತಿಯ ತಾಯಿಯೂ ಕೂಡ ಇದೇ ಅರ್ಥ ಬರುವಂತೆ ಮಾತನಾಡಿ ‘ಅದು ಹೇಗೆ ಬಟ್ಟೆ ಸಂಪೂರ್ಣವಾಗಿ ಹರಿದುಹೋಗುತ್ತದೆ? ಎಂದು ಪ್ರಶ್ನಿಸಿದ್ದರು.
ದೆಹಲಿಯಲ್ಲಿ ಭೀಕರ ಅಪಘಾತಕ್ಕೆ ಒಳಗಾದ ಯುವತಿ ಮೇಲೆ ನಿಜಕ್ಕೂ ಲೈಂಗಿಕ ದೌರ್ಜನ್ಯ ಆಗಿದೆಯಾ? ಇದೀಗ ಬಂದಿರುವ ಶವಪರೀಕ್ಷೆ ವರದಿ ಈ ಪ್ರಶ್ನೆಗೆ ಉತ್ತರಿಸಿದೆ. ಯುವತಿಯ ಮೇಲೆ ಅತ್ಯಾಚಾರ ಆಗಿಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇನ್ನು ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವುದು ಬಾಕಿ ಇದೆ. ಯುವತಿಯ ದೇಹ ನುಜ್ಜುಗುಜ್ಜಾಗಿತ್ತು. ಸುಮಾರು ದೂರ ರಸ್ತೆ ಮೇಲೆ ಎಳೆಯಲ್ಪಟ್ಟ ಕಾರಣ ಹಿಂಬದಿಯ ಚರ್ಮ ಪೂರ್ಣವಾಗಿ ಸುಲಿದು ಹೋಗಿತ್ತು. ಕೈ, ಕಾಲುಗಳೆಲ್ಲ ಸೆವೆತಕ್ಕೆ ಒಳಗಾಗಿದ್ದವು. ಮೈಮೇಲೆ ಸುಟ್ಟ ಗಾಯವಾದರೆ ಹೇಗಾಗುತ್ತದೆಯೋ, ಅಂಥ ಗಾಯಗಳೇ ಯುವತಿ ಮೈಮೇಲೆ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಯುವತಿ ಬೈಕ್ಗೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಬಿಜೆಪಿ ಮುಖಂಡ ಮನೋಜ್ ಮಿತ್ತಲ್ (27), ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣನ್ (27), ಮಿಥುನ್ (26)ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕಾರು ಯಾರು ಚಲಾಯಿಸುತ್ತಿದ್ದರು ಸ್ಪಷ್ಟವಾಗಿಲ್ಲ. ಆದರೆ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದು ಯೂಟರ್ನ್ ತೆಗೆದುಕೊಳ್ಳುವಾಗ ಯುವತಿ ಕಾರಿನ ಅಡಿಯಲ್ಲೇ ಇದ್ದಳು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿದೆ. ಆಮ್ ಆದ್ಮಿ ಪಕ್ಷವಂತೂ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದೆ.
ಇದನ್ನೂ ಓದಿ: Accident in Delhi | ದೆಹಲಿಯ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್, ಸ್ಕೂಟಿಯಲ್ಲಿ ಇದ್ದದ್ದು ಒಬ್ಬರಲ್ಲ ಇಬ್ಬರು!