ನವ ದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ (ಅ.20), 3-8ವರ್ಷದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ತಯಾರಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF)-2022ನ್ನು ಉದ್ಘಾಟಿಸಿದರು. ಹೀಗೆ ಪುಟ್ಟಮಕ್ಕಳಿಗಾಗಿ ರೂಪಿಸಲಾದ ಈ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
ಮೂರರಿಂದ ಆರು ವರ್ಷದವರೆಗಿನ ವಯಸ್ಸಿನ ಮಕ್ಕಳ ಕಲಿಕೆಯಲ್ಲಿ ಯಾವುದೇ ಪಠ್ಯಪುಸ್ತಕಗಳು ಇರಬಾರದು. ಅವರಿಗೆ ಕಲಿಕೆಗೆ ಪೂರಕವಾದ ಆಟಿಕೆಗಳು, ಆಟಗಳು, ಪ್ರಾತ್ಯಕ್ಷಿಕೆಗಳು, ಅವರದ್ದೇ ಮಾತೃಭಾಷೆ, ಭಾರತದ ಮಹಾನ್ ನಾಯಕರ ಕಥೆಗಳ ಮೂಲಕ ಬೋಧನೆ ಮಾಡಬೇಕು. ಅದರಲ್ಲೂ ಅವರಿಗೆ ಅರ್ಥವಾಗುವ ರೀತಿಯಲ್ಲಿ ಸಾಂಪ್ರದಾಯಿಕ ಬೋಧನೆ ಮಾಡಬೇಕು. ವೈವಿದ್ಯತೆಯನ್ನು ಸಾರುವ ಪುಸ್ತಕಗಳ ಪರಿಚಯ ಅವರಿಗೆ ಮಾಡಬೇಕು. ಲಿಂಗ, ನೈತಿಕತೆ ಬಗ್ಗೆ ಅರಿವು ಮೂಡಿಸಬೇಕು. ಹಾಗೇ, ಮೌಲ್ಯಮಾಪನದ ಮತ್ತು ಅವಲೋಕನದ ಮೂಲಕ ಅವರ ಸೃಜನಶೀಲತೆ ವಿಶ್ಲೇಷಣೆ ಮಾಡಬೇಕು ಎಂಬಿತ್ಯಾದಿ ಮಹತ್ವದ ಅಂಶಗಳನ್ನು ಈ ನೂತನ ರಾಷ್ಟ್ರೀಯ ಪಠ್ಯಕ್ರಮದಲ್ಲಿ ಪ್ರಸ್ತಾಪ ಮಾಡಲಾಗಿದೆ.
3-6ವರ್ಷದವರಿಗೆ ಯಾವುದೇ ನಿರ್ದಿಷ್ಟ ಪಠ್ಯಕ್ರಮ ಇಲ್ಲ. ಹೀಗಾಗಿ ಅವರಿಗೆ ಪಠ್ಯಪುಸ್ತಕಗಳ ಹೊರೆ ಹೊರಿಸುವುದಕ್ಕಿಂತಲೂ ಪರ್ಯಾಯ ಮಾರ್ಗದಲ್ಲಿ, ಅವರಿಗೆ ಅರ್ಥವಾಗುವ ರೀತಿಯಲ್ಲಿ ಶಿಕ್ಷಣ ನೀಡುವುದು ಒಳ್ಳೆಯದು. ವರ್ಕ್ಶೀಟ್ ಬಳಕೆ ಮಾಡುವುದು ಉತ್ತಮ ಎಂದು ಈ ಎನ್ಸಿಎಫ್ ಉಲ್ಲೇಖಿಸಿದೆ.
ಹಾಗೇ, ಇನ್ನೊಂದು ಪ್ರಮುಖ ವಿಷಯವನ್ನು ಎನ್ಸಿಎಫ್ ಹೇಳಿದೆ. 6-8 ವರ್ಷದ ಮಕ್ಕಳಿಗೆ ಪಠ್ಯಪುಸ್ತಕಗಳು ಇರಬೇಕು. ಆದರೆ ಇವು ಕೇವಲ ತರಗತಿ ಕಲಿಕೆಯ ವಿಷಯವನ್ನು, ಮಾರ್ಗದರ್ಶನವನ್ನು ಒಳಗೊಂಡಿರಬಾರದು. ಅದೊಂದು ವರ್ಕ್ಬುಕ್ ಆಗಿರಬೇಕು. ಮಕ್ಕಳು ಅವರ ಸ್ವ ತಿಳಿವಳಿಕೆಯಿಂದಲೇ ಕೆಲಸ ಮಾಡಿ, ಅದನ್ನು ದಾಖಲಿಸುವಂತೆ ಇರಬೇಕು. ಭಾಷಾ ಕೌಶಲ, ಸಾಹಿತ್ಯದ ಅರಿವು ಮೂಡಿಸಿರುವಂತೆ ಇರಬೇಕು ಎಂದೂ ಎನ್ಸಿಎಫ್ ತಿಳಿಸಿದೆ. ಅಷ್ಟೇ ಅಲ್ಲ, ಈ ಮಕ್ಕಳ ಕಲಿಕೆಯ ಪುಸ್ತಕದಲ್ಲಿ ‘ಹಾವು, ಗೂಬೆಗಳು ಅಪಶಕುನ, ಕಪ್ಪು ಬಣ್ಣವೆಂಬುದು ಪಾಪದ ಸಂಕೇತ, ತಾಯಿ ಯಾವಾಗಲೂ ಅಡುಗೆಮನೆಯಲ್ಲೇ ಕೆಲಸ ಮಾಡುತ್ತಾಳೆ’ ಎಂಬಿತ್ಯಾದಿ ವಿಷಯಗಳನ್ನು ಹೇಳಬಾರದು. ಮಕ್ಕಳ ಮನಸಲ್ಲಿ ಇಂಥ ವಿಚಾರಗಳು ಬೆಳೆಯಲು ಆಸ್ಪದ ಕೊಡಬಾರದು’ ಎಂದು ಹೇಳಲಾಗಿದೆ.
ಇದನ್ನೂ ಓದಿ: NEP Crisis | ನೂತನ ಶಿಕ್ಷಣ ನೀತಿಯಿಂದ ರಾಜ್ಯದ 40 ಸಾವಿರ ಅಂಗನವಾಡಿ ಶಿಕ್ಷಕಿಯರ ಕೆಲಸಕ್ಕೆ ಕುತ್ತು!