ನೊಯ್ಡಾ: ಮಹಿಳೆಯನ್ನು ನಿಂದಿಸಿ, ಹಲ್ಲೆ ನಡೆಸಿದ ಆರೋಪ (Noida Politician Case) ಹೊತ್ತು ಮೂರು ದಿನಗಳ ಹಿಂದೆ ಉತ್ತರ ಪ್ರದೇಶದಿಂದ ಪರಾರಿಯಾಗಿದ್ದ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮೀರತ್ನಲ್ಲಿ ಇಂದು ಬಂಧಿತರಾಗಿದ್ದಾರೆ. ಇವರು ತಮ್ಮನ್ನು ತಾವು ಬಿಜೆಪಿಯ ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂಬುದಾಗಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಪರಿಚಯ ಬರೆದುಕೊಂಡಿದ್ದಾರೆ. ನೊಯ್ಡಾದ 93 ಬಿನಲ್ಲಿರುವ ಗ್ರ್ಯಾಂಡ್ ಒಮ್ಯಾಕ್ಸ್ ಹೌಸಿಂಗ್ ಸೊಸೈಟಿ ಬಳಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ನಿಂದಿಸಿದ ಆರೋಪದಡಿ ಇವರ ವಿರುದ್ಧ ಕೇಸ್ ದಾಖಲಾಗಿದೆ. ಈ ವಿಡಿಯೋ ಕೂಡ ಎಲ್ಲ ಕಡೆ ವೈರಲ್ ಆಗಿತ್ತು. ಇಂದು ಶ್ರೀಕಾಂತ್ ತ್ಯಾಗಿ ಜತೆ ಇನ್ನೂ ಮೂವರು ಅರೆಸ್ಟ್ ಆಗಿದ್ದಾರೆ.
ಇಂದು ಮುಂಜಾನೆ ಶ್ರೀಕಾಂತ್ ತ್ಯಾಗಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು, ಕರೆದುಕೊಂಡು ಹೋಗಿದ್ದರು. ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರೂ ತನ್ನ ಪತ್ನಿ ಮತ್ತು ವಕೀಲರೊಂದಿಗೆ ಸಂಪರ್ಕ ಸಾಧಿಸಲು ಸದಾ ಪ್ರಯತ್ನಿಸುತ್ತಲೇ ಇದ್ದ. ಈ ಬಗ್ಗೆ ಖಚಿತ ಮಾಹಿತಿ ಇದ್ದುದರಿಂದಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು. ಅದಕ್ಕೂ ಮೊದಲು ನೊಯ್ಡಾ ಪೊಲೀಸರು ಶುಕ್ರವಾರ ತ್ಯಾಗಿ ಪತ್ನಿಯನ್ನು ಸುಮಾರು 24 ತಾಸುಗಳ ಕಾಲ ವಿಚಾರಣೆ ನಡೆಸಿದ್ದರು. ಆತನ ಇನ್ನೊಬ್ಬ ಸಂಬಂಧಿಯನ್ನೂ ಪೊಲೀಸರು ಕರೆದುಕೊಂಡುಹೋಗಿದ್ದರು.
ಗ್ರ್ಯಾಂಡ್ ಒಮ್ಯಾಕ್ಸ್ ಹೌಸಿಂಗ್ ಸೊಸೈಟಿಗೆ ಸೇರಿದ ಪಾರ್ಕನ್ನು ಶ್ರೀಕಾಂತ್ ತ್ಯಾಗಿ ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ಈ ಮಧ್ಯೆ ಅವರು ಈ ಪಾರ್ಕ್ನಲ್ಲಿ ಸಸಿಗಳನ್ನು ನೆಡಲು ಮುಂದಾಗಿದ್ದರು. ಹೀಗೆ ಮಾಡಿದರೆ ಇಲ್ಲಿ ಕಟ್ಟಡದಲ್ಲಿರುವ ಜನರಿಗೆ ತೊಂದರೆ ಆಗುತ್ತದೆ ಎಂದು ಮಹಿಳೆ ವಿರೋಧಿಸಿದ್ದರು. ಹಾಗಾಗಿ ಶ್ರೀಕಾಂತ್ ತ್ಯಾಗಿ ಆಕೆಯನ್ನು ನಿಂದಿಸಿ, ತಳ್ಳಿದ್ದಾರೆ. ಈ ಬಗ್ಗೆ ಮಹಿಳೆಯೇ ಹೋಗಿ ಡಿಜಿಪಿಗೆ ದೂರು ಕೊಟ್ಟಿದ್ದರು. ಆದರೆ ದೂರು ದಾಖಲಾಗುತ್ತಿದ್ದಂತೆ ಶ್ರೀಕಾಂತ್ ತ್ಯಾಗಿ ಪರಾರಿಯಾಗಿದ್ದರು. ಅವರ ಸುಳಿವುಕೊಟ್ಟವರಿಗೆ 25 ಸಾವಿರ ಬಹುಮಾನ ಕೊಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.
ಇದನ್ನೂ ಓದಿ:Shreekant Tyagi | ಇನ್ನೂ ಬಾರದ ತ್ಯಾಗಿ; ಆತನ ಪತ್ನಿಯನ್ನು ವಶಕ್ಕೆ ಪಡೆದ ಉತ್ತರ ಪ್ರದೇಶ ಪೊಲೀಸ್