ನೊಯ್ಡಾ: ಇಲ್ಲಿನ ಎಮರಾಲ್ಡ್ ಕೋರ್ಟ್ ಆವರಣದಲ್ಲಿರುವ ಸೂಪರ್ಟೆಕ್ನ ಅವಳಿ ಕಟ್ಟಡಗಳು ಇನ್ನು 24ಗಂಟೆಯೊಳಗೆ ನೆಲಸಮಗೊಳ್ಳಲಿವೆ (Twin Tower Demolition). ಆಗಸ್ಟ್ 28ರಂದು ಮಧ್ಯಾಹ್ನ 2.30ರಿಂದ ಅವಳಿ ಕಟ್ಟಡಗಳ ಧ್ವಂಸ ಪ್ರಕ್ರಿಯೆ ಶುರುವಾಗಲಿದೆ. ಆಕಾಶದೆತ್ತರದ ಕಟ್ಟಡಗಳನ್ನು ಕೆಡವಲು ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸ್ಥಳೀಯ ಆಡಳಿತದ ಅಧಿಕಾರಿಗಳು ಈ ಪ್ರದೇಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಟ್ಟಡ ನೆಲಸಮ, ನಂತರ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಹಲವು ನಿರ್ದೇಶನಗಳನ್ನೂ ಕೊಟಿದ್ದಾರೆ.
ಶುಕ್ರವಾರ (ಆಗಸ್ಟ್ 26) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೊಯ್ಡಾದ ಅವಳಿ ಕಟ್ಟಡ ಇರುವ ಸ್ಥಳಕ್ಕೆ ಭೇಟಿ ಕೊಟ್ಟು ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಕಟ್ಟಡಗಳ ನೆಲಸಮ ಸಂದರ್ಭದಲ್ಲಿ ಇಲ್ಲಿ ಸುತ್ತಮುತ್ತಲೂ ಇರುವ ಜನರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೇ, ಕಟ್ಟಡ ಕೆಡವುವಾಗ ಆ ನಿರ್ದಿಷ್ಟ ಪರಿಸರದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ಅದರ ಬಗ್ಗೆಯೂ ಗಮನಕೊಡುವಂತೆ ತಿಳಿಸಿದ್ದಾರೆ.
ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದರಲ್ಲಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣಾ ಮಂಡಳಿ, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (CBRI) ಅಧಿಕಾರಿಗಳು ಪಾಲ್ಗೊಂಡಿದ್ದರು. ಇನ್ನು, ಅವಳಿ ಕಟ್ಟಡಗಳ ಧ್ವಂಸ ಕಾರ್ಯ ನಡೆಯುವ ಹೊತ್ತಲ್ಲಿ, ಆ ವಾಯುಪ್ರದೇಶದಲ್ಲಿ ಯಾವುದೇ ವಿಮಾನಗಳೂ ಹಾರಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಆ ಏರಿಯಾವನ್ನು ನೋ ಫ್ಲೈಯಿಂಗ್ ಝೋನ್ ಎಂದು ಗುರುತಿಸಲು ಕೇಂದ್ರ ವಾಯುಯಾನ ಸಂಸ್ಥೆ ಈಗಾಗಲೇ ಅನುಮತಿಯನ್ನೂ ಕೊಟ್ಟಿದೆ.
ಏನೆಲ್ಲ ಸಿದ್ಧತೆಗಳು?
1. ಧರೆಗೆ ಉರುಳಲಿರುವ ಕಟ್ಟಡಗಳು ಇರುವ ಪ್ರದೇಶದ ಸುತ್ತ ಆರು ಸ್ಥಳಗಳಲ್ಲಿ, ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣಾ ಮಂಡಳಿ ಹೊರಗಿನ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅವು ಇವತ್ತಿನಿಂದಲೇ ಕಾರ್ಯಾರಂಭ ಮಾಡಿವೆ. ಕಟ್ಟಡಗಳನ್ನು ನೆಲಸಮ ಮಾಡುವಾಗ ಸ್ಥಳದಲ್ಲಿ ಒಂದು ಸಲ ವಿಪರೀತ ವಾಯುಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
2. ನೆಲಸಮಗೊಂಡ ಕಟ್ಟಡಗಳಿಂದ ಉಂಟಾಗುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲೆಂದೇ ನಾಲ್ಕು ಸ್ವಯಂಚಾಲಿತ ಗುಡಿಸುವ ಯಂತ್ರಗಳನ್ನು (ಮೆಕ್ಯಾನಿಕಲ್ ಸ್ವೀಪಿಂಗ್ ಮಷಿನ್ಸ್)ಸ್ಥಳಕ್ಕೆ ತಂದಿಡಲಾಗಿದೆ. 100 ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಹಾಗೇ, ಗಲೀಜಾಗುವ ರಸ್ತೆಗಳನ್ನು ಫೂಟ್ಪಾತ್ಗಳು, ಮರಗಿಡಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆಂದು 50 ನೀರಿನ ಟ್ಯಾಂಕರ್ಗಳನ್ನು ಸಿದ್ಧಗೊಳಿಸಿಡಲಾಗಿದೆ.
3. ನೊಯ್ಡಾ ಆರೋಗ್ಯ ಇಲಾಖೆಯೂ ಸಕಲ ವ್ಯವಸ್ಥೆ ಮಾಡಿಟ್ಟುಕೊಂಡಿದೆ. ಕಟ್ಟಡ ನೆಲಸಮದ ಹೊತ್ತಲ್ಲಿ ಏನಾದರೂ ಅವಘಡವಾಗಿ ಯಾರಾದರೂ ಗಾಯಗೊಂಡರೆ, ಅಸ್ವಸ್ಥಗೊಂಡರೆ ಕೂಡಲೇ ಚಿಕಿತ್ಸೆ ಕೊಡಿಸಲು ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ಹಾಗೇ, ಇದಕ್ಕೆಂದು ಮೂರು ಖಾಸಗಿ ಆಸ್ಪತ್ರೆಗಳೂ ಕೂಡ ರೆಡಿಯಾಗಿವೆ.
4. ಕಟ್ಟಡ ನೆಲಸಮಕ್ಕೆ ಸಂಬಂಧಪಟ್ಟಂತೆ ಯಾವುದೇ ತುರ್ತು ಕರೆ ಸ್ವೀಕರಿಸಿ, ಅಗತ್ಯವಿರುವ ಸೇವೆ ಸಲ್ಲಿಸಲು ಕಂಟ್ರೋಲ್ ರೂಮ್ಗಳ ಸ್ಥಾಪನೆಯಾಗಿದೆ. ಈ ಕಂಟ್ರೋಲ್ ರೂಮ್ಗಳು ಆಗಸ್ಟ್ 28ರ ಮುಂಜಾನೆ 6ಗಂಟೆಯಿಂದ, ಆಗಸ್ಟ್ 30ರವರೆಗೂ ಕಾರ್ಯ ನಿರ್ವಹಿಸಲಿವೆ. ಯಾವುದೇ ಮಾಹಿತಿ/ದೂರಿಗಾಗಿ 0120-2425301, 0120-2425302, 0120-2425025 11 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: Twin Towers | ಅವಳಿ ಕಟ್ಟಡಗಳ ನೆಲಸಮದ ತ್ಯಾಜ್ಯವೇ ಕುತುಬ್ ಮಿನಾರ್‌ಗಿಂತ ಎತ್ತರ ಇರಲಿದೆ!