ನವದೆಹಲಿ: ಭಾರತ ಸೇರಿ ಇಡೀ ಜಗತ್ತೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ (Artificial Intelligence) ತೆರೆದುಕೊಳ್ಳುತ್ತಿದೆ. ಅದರಲ್ಲೂ, ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಚಾಟ್‌ಬಾಟ್‌ಗಳು ಜನರ ಉದ್ಯೋಗಗಳನ್ನೇ ಕಸಿಯುತ್ತವೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜನರ ಉದ್ಯೋಗಗಳಿಗೆ ಕಲ್ಲು ಹಾಕುತ್ತದೆಯೇ ಎಂಬ ಪ್ರಶ್ನೆಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಇಂತಹ ಮಾತುಗಳಿಗೆ ಯಾವುದೇ ಹುರುಳಿಲ್ಲ. ಇದೆಲ್ಲ ಶುದ್ಧ ನಾನ್‌ಸೆನ್ಸ್” ಎಂದಿದ್ದಾರೆ.
“ಭಾರತದಲ್ಲಿ ಕೃತಕ ಬುದ್ಧಿಮತ್ತೆಯು ಎಲ್ಲರ ಉದ್ಯೋಗಗಳನ್ನು ಕಸಿಯುತ್ತದೆ ಎಂಬುದು ಸರಿಯಲ್ಲ. ಇದು ತುಂಬ ಸಿನಿಕತನದಿಂದ ಹೇಳುವ ಮಾತು. 1999ರಲ್ಲಿ ಕಂಪ್ಯೂಟರ್ ಬಳಕೆ, ಬ್ಯಾಂಕ್‌ಗಳಲ್ಲಿ ಅಳವಡಿಕೆ ಹೆಚ್ಚಾದಾಗ (Y2K) ಜಗತ್ತೇ ನಾಶವಾಗುತ್ತದೆ ಎಂದೆಲ್ಲ ಹೇಳಿದರು. ಈಗ ಕೃತಕ ಬುದ್ಧಿಮತ್ತೆಯು ಜನರ ಉದ್ಯೋಗಕ್ಕೆ ಕಲ್ಲು ಹಾಕುತ್ತದೆ. ನಾವೀನ್ಯತೆ, ಸಂಶೋಧನೆ ಎಂಬುದೇ ನಿರ್ನಾಮವಾಗುತ್ತದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ, ಈ ಮಾತುಗಳಿಗೆಲ್ಲ ಹುರುಳಿಲ್ಲ” ಎಂದು ಹೇಳಿದರು.
“ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು ಮಾನವನನ್ನು ಅನುಕರಿಸಿ ಕೆಲಸ ಮಾಡುತ್ತದೆ. ಇದರಿಂದ ಮನುಷ್ಯರ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಸಂಶೋಧನೆ ಮಾಡುವವರು, ನವೋದ್ಯಮಗಳಿಗೆ ಉತ್ತೇಜನ ನೀಡಲು, ಡೇಟಾ ಸೆಟ್‌ಅಪ್ ಪ್ರೋಗ್ರಾಮ್ ಕೂಡ ಅಳವಡಿಸಿಕೊಳ್ಳಲು ಮುಂದಾಗಿದೆ. ಕೃತಕ ಬುದ್ಧಿಮತ್ತೆಯಿಂದ ದೇಶದಲ್ಲಿ ಸಂಶೋಧನೆ, ನಾವೀನ್ಯತೆ, ಕಾರ್ಯಕ್ಷಮತೆ, ದಕ್ಷತೆ ಹೆಚ್ಚಾಗಲು ಕಾರಣವಾಗಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Adobe Photoshop: ಫೋಟೋಶಾಪ್‌ಗೆ ಕೃತಕ ಬುದ್ಧಿಮತ್ತೆ ಪರಿಚಯಿಸಿದ ಅಡೋಬ್, ಏನಿದು ಜನರೇಟಿವ್ ಫಿಲ್?
“ಭಾರತವು ತಂತ್ರಜ್ಞಾನಕ್ಕೆ ಮುಕ್ತವಾಗುತ್ತಿದೆ. ಭಾರತದಲ್ಲಿಯೇ ಸೆಮಿ ಕಂಡಕ್ಟರ್‌ಗಳ ವಿನ್ಯಾಸ, ಉತ್ಪಾದನೆ, ಮಾರುಕಟ್ಟೆಯ ವ್ಯಾಪ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸೆಮಿ ಕಂಡಕ್ಟರ್‌ಗಳ ತಂತ್ರಜ್ಞಾನ, ಉತ್ಪಾದನೆಯಲ್ಲಿ ಚೀನಾ 30 ವರ್ಷಗಳಲ್ಲಿ ಸಾಧಿಸಿದ್ದನ್ನು ನಾವು 10 ವರ್ಷದಲ್ಲೇ ಸಾಧಿಸುತ್ತೇವೆ. ಮೂರರಿಂದ ಐದು ವರ್ಷದಲ್ಲಿ ಭಾರತವು ಜಾಗತಿಕ ಸ್ಪರ್ಧಾತ್ಮಕ ಗುಣಮಟ್ಟದ ಸೆಮ ಕಂಡಕ್ಟರ್‌ಗಳನ್ನು ಉತ್ಪಾದಿಸಲಿದೆ” ಎಂದು ವಿವರಿಸಿದರು.