ಮಧುರೈ: ಸ್ಪೈಸ್‌ಜೆಟ್ ವಿಮಾನ (SpiceJet Flight) ಗಳಲ್ಲಿನ ತಾಂತ್ರಿಕ ದೋಷ ಮುಂದುವರಿದಿದೆ. ದುಬೈನಿಂದ ಮಧುರೈಗೆ ಆಗಮಿಸಬೇಕಿದ್ದ ಸ್ಪೈಸ್‌ಜೆಟ್ ಏರ್‌ಲೈನ್ಸ್‌ಗೆ ಸೇರಿದ, ಬೋಯಿಂಗ್ B737 ಮ್ಯಾಕ್ಸ್ ವಿಮಾನದ ಮುಂಭಾಗದ ಚಕ್ರದಲ್ಲಿ ದೋಷ ಕಂಡು ಬಂದು, ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಸರಿಯಾದ ಸಮಯದಲ್ಲಿ ಅದು ಮಧುರೈ ತಲುಪಿಲ್ಲ. ಸ್ಪೈಸ್‌ಜೆಟ್ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿರುವುದು ಕಳೆದ 24 ದಿನಗಳಲ್ಲಿ ಇದು 9ನೇ ಪ್ರಕರಣವಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಸಿಜಿಎ) ತಿಳಿಸಿದೆ.
ಈ ಸಲ ದೋಷ ಕಂಡುಬಂದಿದ್ದು VT-SZK ನೋಂದಣಿ ಸಂಖ್ಯೆಯ ವಿಮಾನದಲ್ಲಿ. ಇದು ಮಂಗಳೂರಿನಿಂದ ದುಬೈಗೆ ಹೋಗಿ ಲ್ಯಾಂಡ್ ಆಗಿತ್ತು. ವಿಮಾನ ಲ್ಯಾಂಡ್ ಆದ ಬಳಿಕ ಎಂಜಿನಿಯರ್‌ವೊಬ್ಬರು ವಿಮಾನವನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅದರ ಮುಂದಿನ ಚಕ್ರ ಅಗತ್ಯಕ್ಕಿಂತ ಹೆಚ್ಚು ಭೂಮಿಗೆ ಒತ್ತಿಕೊಂಡಿರುವುದು ಕಂಡು ಬಂದಿದೆ. ಇದು ಬಹುದೊಡ್ಡ ಸಮಸ್ಯೆ ಅಲ್ಲದೆ ಇದ್ದರೂ, ಮುಂಜಾಗ್ರತಾ ಕ್ರಮವಾಗಿ ಆ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಲಿಲ್ಲ. ಈ ವಿಮಾನಕ್ಕೆ ಟಿಕೆಟ್ ಮಾಡಿಸಿದ್ದ ಪ್ರಯಾಣಿಕರಿಗಾಗಿ ಮುಂಬೈನಿಂದ ದುಬೈಗೆ ಇನ್ನೊಂದು ವಿಮಾನವನ್ನು ಕಳಿಸಲಾಗಿತ್ತು. ಅದು ಅಲ್ಲಿ ಹೋಗಿ, ಪ್ರಯಾಣಿಕರನ್ನು ಹೊತ್ತು ಮಧುರೈಗೆ ಬಂದಿದೆ.
ಇದನ್ನೂ ಓದಿ: ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಂಡ ಬಳಿಕ ತುರ್ತು ಭೂಸ್ಪರ್ಶ, 2 ತಿಂಗಳಲ್ಲಿ 4ನೇ ಅವಘಡ
ಈ ಬಗ್ಗೆ ಸ್ಪೈಸ್‌ಜೆಟ್‌ನ ವಕ್ತಾರ ಪ್ರತಿಕ್ರಿಯೆ ನೀಡಿ, ಜುಲೈ 11ರಂದು ದುಬೈನಿಂದ ಮಧುರೈಗೆ ಬರಬೇಕಿದ್ದ ವಿಮಾನದಲ್ಲಿ ದೋಷ ಕಂಡುಬಂದಿದ್ದು ಸತ್ಯ. ಪರ್ಯಾಯವಾಗಿ ಇನ್ನೊಂದು ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ವಿಮಾನಯಾನ ಸಂಸ್ಥೆಯ ವಿಮಾನಗಳೂ ವಿಳಂಬವಾಗುವುದು ಸಹಜ. ಅಂದಹಾಗೇ, ಪ್ರಸ್ತುತ ಸ್ಪೈಸ್ ಜೆಟ್‌ನಲ್ಲಿ ಕಂಡುಬಂದ ದೋಷ ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತರುವಂಥದ್ದಾಗಿರಲಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸ್ಪೈಸ್‌ಜೆಟ್ ವಿಮಾನಗಳಲ್ಲಿ ಪದೇಪದೆ ಇಂಥ ದೋಷಗಳು ಕಂಡುಬರುತ್ತಿವೆ. ಮೂರ್ನಾಲ್ಕು ವಿಮಾನಗಳು ಮಾರ್ಗ ಮಧ್ಯೆಯಿಂದ ವಾಪಸ್ ಆಗಿದ್ದೂ ಇದೆ. ಜೂ.19ರಿಂದ ಜುಲೈ 6ರವರೆಗೆ ಒಟ್ಟು 8 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ಬಗ್ಗೆ ಜುಲೈ 6ರಂದು ಡಿಜಿಸಿಎ, ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ.
ಇದನ್ನೂ ಓದಿ: ಸ್ಪೈಸ್ ಜೆಟ್ ವಿಮಾನಗಳಿಗೆ ಆಕಾಶ ದೋಷ!; ಮಾರ್ಗ ಮಧ್ಯೆ ಬಿರುಕುಬಿಟ್ಟ ವಿಂಡ್ ಶೀಲ್ಡ್