ನವ ದೆಹಲಿ: ತಾಯಿ ಹೀರಾಬೆನ್ ತನ್ನ ಮಗನೇ ಪ್ರಧಾನಿಯಾದರೂ ಅದೆಷ್ಟು ಸರಳವಾಗಿ ಬಾಳಿದ್ದರೋ, ಅವರು ಮೃತಪಟ್ಟ ಮೇಲೆ ಅಂತಿಮ ವಿಧಿವಿಧಾನಗಳು-ಅಂತಿಮ ಸಂಸ್ಕಾರವೂ ಅಷ್ಟೇ ಸರಳವಾಗಿ ನಡೆದುಹೋಯಿತು. ಪ್ರಧಾನಿ ಮೋದಿ, ಮನಸು ಮಾಡಿದ್ದರೆ ತಮ್ಮ ಶತಾಯುಷಿ ತಾಯಿಯ ಅಂತ್ಯ ಸಂಸ್ಕಾರವನ್ನು ಇನ್ನಷ್ಟು ಆಡಂಬರವಾಗಿ ಮಾಡಬಹುದಿತ್ತು. ಅವರು ಸುಮ್ಮನೆ ಅಂತ್ಯಕ್ರಿಯೆಯ ಸಮಯ ಘೋಷಣೆ ಮಾಡಿದ್ದರೂ ಸಾಕಿತ್ತು, ಮೋದಿಯವರ ತಾಯಿಯ ಅಂತ್ಯಕ್ರಿಯೆ ಅದ್ಧೂರಿಯಾಗಿ ನಡೆಯಲು ವ್ಯವಸ್ಥೆಗಳೆಲ್ಲ ಅದರಪಾಡಿಗೇ ಅದು ಆಗಿಹೋಗುತ್ತಿತ್ತು. ಸಾವಿರಾರು ಜನರೇ ಸೇರಿಬಿಡುತ್ತಿದ್ದರು. ಆದರೆ ಅಂಥದ್ದೇನೂ ಆಗಲೇ ಇಲ್ಲ. ಪ್ರಧಾನಿ ಮೋದಿ ಸಮ್ಮುಖದಲ್ಲಿ ಎಲ್ಲ ಆಚರಣೆಗಳೂ ನಡೆದವು. ಮೋದಿಯವರು ಕೊನೆಯಲ್ಲಿ ತಾಯಿಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
ಇದೆಲ್ಲಕ್ಕಿಂತಲೂ ಇನ್ನೂ ಒಂದು ವಿಷಯದಲ್ಲಿ ಪ್ರಧಾನಿ ಮೋದಿ ಮಾದರಿಯಾದರು. ಅವರು ತಾಯಿಯ ಅಂತಿಮ ಸಂಸ್ಕಾರ ಮುಗಿಸಿ ಮತ್ತೆ ತಮ್ಮ ಕರ್ತವ್ಯಕ್ಕೆ ಮರಳಿದರು. ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ, ಗುಜರಾತ್ನ ರಾಜಭವನಕ್ಕೆ ಬಂದ ಅವರು ಪಶ್ಚಿಮ ಬಂಗಾಳದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದರು. ಇನ್ನುಳಿದ ಯಾವುದೇ ಕೇಂದ್ರ ಸಚಿವರುಗಳು ಕಾರ್ಯಕ್ರಮಗಳೂ ರದ್ದುಗೊಂಡಿಲ್ಲ. ಅಮಿತ್ ಶಾ ಕರ್ನಾಟಕಕ್ಕೆ ಬಂದಿದ್ದರೆ, ಅತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇರಳದ ತಿರುವನಂತಪುರಂನಲ್ಲಿರುವ ವರ್ಕಲಾಕ್ಕೆ ತೆರಳಿ ಶಿವಗಿರಿಯ ಯಾತ್ರೆಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ‘ಪ್ರಧಾನಿ ನರೇಂದ್ರ ಮೋದಿಯವರ ಪ್ರೀತಿಯ ತಾಯಿ ತೀರಿಕೊಂಡಿದ್ದಾರೆ. ಈ ವಿಷಯ ಕೇಳಿದ ತಕ್ಷಣ, ನಾನು ಇಂದು ಈ ಕಾರ್ಯಕ್ರಮ ರದ್ದುಗೊಳಿಸಿ ವಾಪಸ್ ದೆಹಲಿಗೆ ಹೋಗಿಬಿಡೋಣೆ ಎಂದು ಒಮ್ಮೆ ಆಲೋಚನೆ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನಮಗೆಲ್ಲರಿಗೂ ಒಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಯಾವ ಕಾರಣಕ್ಕೂ ಈಗಾಗಲೇ ನಿಗದಿತಗೊಂಡಿರುವ ಕಾರ್ಯಕ್ರಮಗಳನ್ನು ಯಾರೂ ರದ್ದುಗೊಳಿಸಬಾರದು. ಪೂರ್ವನಿಗದಿತ ಕಾರ್ಯಕ್ರಮಗಳೆಲ್ಲ ಆ ಸಮಯದಲ್ಲೇ ನಡೆಯಬೇಕು ಎಂದು ನರೇಂದ್ರ ಮೋದಿಯವರು ಕ್ಯಾಬಿನೆಟ್ ಸಚಿವರಿಗೆಲ್ಲ ಅದಾಗಲೇ ಹೇಳಿಬಿಟ್ಟಿದ್ದರು’ ಎಂದು ತಿಳಿಸಿದ್ದಾರೆ. ಹಾಗೇ, ಯಾತ್ರೆ ಉದ್ಘಾಟನೆಗೂ ಮೊದಲು ಕೆಲಕಾಲ ಮೌನಾಚರಣೆಯನ್ನೂ ನಡೆಸಿ, ಹೀರಾಬೆನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೈರಲ್ ಆಗ್ತಿದೆ ಪೋಸ್ಟ್
ಪ್ರಧಾನಿ ನರೇಂದ್ರ ಮೋದಿಯವರ ತಾಯಿಯ ಅಂತ್ಯಕ್ರಿಯೆ ನಡೆದ ರೀತಿ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಗಣ್ಯರು ಮೃತಪಟ್ಟರೆ, ಗಣ್ಯರ ಕುಟುಂಬದವರು ಮೃತಪಟ್ಟರೆ ಅವರ ಅಂತಿಮ ದರ್ಶನ, ಅಂತ್ಯಕ್ರಿಯೆ ವೇಳೆ ಅನೇಕರು ಕಾಣಿಸಿಕೊಳ್ಳುತ್ತಾರೆ. ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸುತ್ತಾರೆ. ಶವಯಾತ್ರೆಯನ್ನೇ ತಾಸುಗಟ್ಟಲೆ ಮಾಡುವವರೂ ಇದ್ದಾರೆ. ಆದರೆ ಇಡೀ ದೇಶಕ್ಕೆ ಯಜಮಾನ ಆಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯ ತಾಯಿ ಅಂತಿಮ ಸಂಸ್ಕಾರದ ವೇಳೆ ಇದ್ಯಾವುದಕ್ಕೂ ಆಸ್ಪದವೇ ಇರಲಿಲ್ಲ. ಕೊನೆಗೆ ಸರ್ಕಾರಿ ಗೌರವವನ್ನೂ ಕೊಡಲಿಲ್ಲ. ತಾಯಿ ಪಾರ್ಥಿವ ಶರೀರಕ್ಕೆ ಮೋದಿಯವರು ಹೆಗಲು ಕೊಟ್ಟರು, ಉರಿಯುತ್ತಿದ್ದ ಚಿತೆಯ ಎದುರು ಕೈಕಟ್ಟಿ ನಿಂತು ಕಣ್ಣೀರಾದರು. ಅಲ್ಲಿ ಒಂದು ಭಾವುಕ, ದಿವ್ಯ ಕ್ಷಣವಿತ್ತೇ ಹೊರತು ಆಡಂಬರತೆಯ ಲವಲೇಶವೂ ಇರಲಿಲ್ಲ.
ಈ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್ ಹರಿದಾಡುತ್ತಿದೆ. ‘ಬೆಳಗ್ಗೆ 6 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ ಮುಗಿದೋಯ್ತು. ಕೇವಲ 3:30 ಗಂಟೆ ಅಷ್ಟೇ. ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ಮುಗಿದೋಯ್ತು ಬೆಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ
ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ
ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ
ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ
ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ
ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ
ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ…
ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ
ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ
ಸಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯ ಕ್ರಿಯೆ… 11:30 ಕ್ಕೆ ತಾಯಿಯ ಅಂತಿಮ ಕರ್ತವ್ಯ ಮುಗಿಸಿ, ರಾಷ್ಟ್ರದ ಸೇವೆಗೆ ಹಿಂದಿರುಗಿದ ಮಗ. ಇಂತಹ ಕರ್ಮಯೋಗಿಗಳನ್ನು ನಾವು ಪಡೆದಿದ್ದೇವೆ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ಈ ತಾಯಿ-ಮಗ ಎಂದಿಗೂ ರಾಷ್ಟ್ರಕ್ಕೆ ಮಾದರಿ’ ಎಂಬುದು ಈ ಪೋಸ್ಟ್ನ ಸಾರಾಂಶ.
ಇದನ್ನೂ ಓದಿ: Heeraben Modi | ವಿಶ್ವದ ಮನುಕುಲವನ್ನು ಕಾಪಾಡಪ್ಪಾ ಎಂದು ಮೋದಿಯವರಿಗೆ ಆಶೀರ್ವದಿಸಿದ್ದ ಹೀರಾಬೆನ್: ಶಾಸಕ ರಾಮದಾಸ್ ನೆನಪು