ಅಮೃತ್ಸರ್: ಖಲಿಸ್ತಾನಿ ನಾಯಕ, ವಾರಿಸ್ ಪಂಜಾಬ್ ದೆ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ (Amritpal Singh) ಇಂದು ಪಂಜಾಬ್ನ ಮೊಗಾ ಜಿಲ್ಲೆಯ ರೊಡೆ ಎಂಬ ಗ್ರಾಮದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐನ ಕೈಗೊಂಬೆಯಾಗಿದ್ದುಕೊಂಡು, ಭಾರತದಲ್ಲಿ ಅಶಾಂತಿ ಸೃಷ್ಟಿಸುತ್ತ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಮಾರ್ಚ್ 18ರಂದು ಒಮ್ಮೆ ಪೊಲೀಸರಿಗೆ ಸಿಕ್ಕೇಬಿಟ್ಟ ಎಂದಾಗಿತ್ತು. ಆದರೆ ಅಂದು ಕ್ಷಣದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದವನ ಸುಳಿವೇ ಇರಲಿಲ್ಲ. ಆತ ದೇಶಬಿಟ್ಟು ನೇಪಾಳಕ್ಕೆ ಹೋಗಿರಬಹುದು ಎಂಬ ಅನುಮಾನವೂ ಇತ್ತು. ಸ್ವಲ್ಪ ದಿನಗಳ ಹಿಂದೆ ವಿಡಿಯೊವೊಂದನ್ನು ಹರಿಬಿಟ್ಟಿದ್ದ ಅಮೃತ್‌ಪಾಲ್ ಸಿಂಗ್ ತಾನು ಯಾವ ಕಾರಣಕ್ಕೂ ಪೊಲೀಸರ ಎದುರು ಶರಣಾಗುವುದೇ ಇಲ್ಲ ಎಂದೂ ಹೇಳಿಕೊಂಡಿದ್ದ. ಆದರೆ ಈಗ ಕಾನೂನಿನ ಎದುರು ಮಂಡಿಯೂರಿದ್ದಾನೆ.
ಅಮೃತ್‌ಪಾಲ್ ಸಿಂಗ್ ಇಷ್ಟು ದಿನ ಬೇರೆಲ್ಲೂ ಹೋಗಿರಲಿಲ್ಲ. ಈ ರೊಡೆ ಗ್ರಾಮದಲ್ಲಿಯೇ ಅಡಗಿದ್ದ ಎಂದು ಹೇಳಲಾಗಿದೆ. ಈ ರೊಡೆ ಹಳ್ಳಿ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಹುಟ್ಟೂರು. 1984ರ ಜೂನ್ನಲ್ಲಿ ಅಂದಿನ ಸರ್ಕಾರ ನಡೆಸಿದ್ದ ಆಪರೇಶನ್ ಬ್ಲ್ಯೂಸ್ಟಾರ್ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನಂತರ ಅವನಂತೆಯೇ ತಯಾರಾಗುತ್ತಿರುವ ಇನ್ನೊಬ್ಬ ಖಲಿಸ್ತಾನಿ ನಾಯಕ ಈ ಅಮೃತ್‌ಪಾಲ್ ಸಿಂಗ್ ಎಂಬ ಹಣೆಪಟ್ಟಿಯೂ ಈತನಿಗೆ ಸಿಕ್ಕಿತ್ತು. ಇದೀಗ ತಾನು ಆದರ್ಶವಾಗಿ ಇಟ್ಟುಕೊಂಡಿದ್ದ ಭಿಂದ್ರನ್‌ವಾಲೆ ಹುಟ್ಟಿದ ಊರಲ್ಲೇ ಆತ ಶರಣಾಗಿದ್ದಾನೆ.
ಇದೇನೂ ಕೊನೆಯಲ್ಲ ಎಂದ ಅಮೃತ್‌ಪಾಲ್ ಸಿಂಗ್!
ಇಂದು ಮುಂಜಾನೆ ರೊಡೆಯಲ್ಲಿರುವ ಗುರುದ್ವಾರದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾನೆ. ಹೀಗೆ ಅವನು ಪೊಲೀಸರಿಗೆ ಶರಣಾಗುವ ಹೊತ್ತಲ್ಲೂ ಅಧಿಕಪ್ರಸಂಗತನದ ಮಾತುಗಳನ್ನೇ ಆಡಿದ್ದಾನೆ. ‘ಇಲ್ಲಿಗೆ ಎಲ್ಲವೂ ಅಂತ್ಯ ಅಲ್ಲ’ ಎಂದು ಹೇಳಿದ್ದಾನೆ. ಅಂದರೆ ಶರಣಾಗುವುದರ ಹಿಂದೆಯೂ ತಾನೇನೋ ಯೋಜನೆ ರೂಪಿಸಿದ್ದೇನೆ ಎಂಬರ್ಥ ಬರುವಂತೆ ಮಾತನಾಡಿದ್ದಾನೆ.
ಇದನ್ನೂ ಓದಿ: Amritpal Sing arrest : ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್ ಸಿಂಗ್ ಬಂಧನ
ಅಮೃತ್‌ಪಾಲ್ ಸಿಂಗ್ನ ಪತ್ನಿ ಕಿರೆಣ್ದೀಪ್ ಕೌರ್ ಮೊನ್ನೆಯಷ್ಟೇ ಬಂಧಿತಳಾಗಿದ್ದಳು. ಲಂಡನ್ಗೆ ತೆರಳಲೆಂದು ಅಮೃತ್ಸರ್ ಏರ್ಪೋರ್ಟ್ಗೆ ಹೋಗಿದ್ದ ಅವಳನ್ನು ಅಲ್ಲಿಂದಲೇ ಪೊಲೀಸರು ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದರು. ಅದರ ಬೆನ್ನಲ್ಲೇ ಅಮೃತ್‌ಪಾಲ್ ಸಿಂಗ್ ಶರಣಾಗಿದ್ದಾನೆ. ಇನ್ನು ಮೊಗಾದಲ್ಲಿ ಅಮೃತ್ಪಾಲ್ನನ್ನು ಬಂಧಿಸಿದ ಪೊಲೀಸರು ಆತನಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ ಭಟಿಂಡಾ ಏರ್ಫೋರ್ಸ್ ಸ್ಟೇಶನ್ಗೆ ಕರೆದೊಯ್ದಿದ್ದಾರೆ. ಕೆಲವೇ ಹೊತ್ತಲ್ಲಿ ಅವನನ್ನು ಅಸ್ಸಾಂನ ದಿಬ್ರುಗರ್ಗೆ ಕರೆದೊಯ್ದು, ಅಲ್ಲಿನ ಜೈಲಿನಲ್ಲಿ ಇಡಲಾಗುತ್ತದೆ ಎಂದು ಹೇಳಲಾಗಿದೆ.