ನವ ದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಿಸಲಾದ ನೂತನ ಸಂಸತ್ ಭವನ (New Parliament Building)ವನ್ನು ಮೇ 28ರಂದು, ವೀರ ಸಾವರ್ಕರ್ ಜನ್ಮ ದಿನದಂದೇ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಉದ್ಘಾಟನೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆ ವಿಚಾರಕ್ಕೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕ್ಯಾತೆ ತೆಗೆದಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು ‘ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಬೇಕು ಹೊರತು ಪ್ರಧಾನಮಂತ್ರಿ ಮಾಡಬಾರದು’ ಎಂದು ಹೇಳಿದ್ದಾರೆ.
ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯರು ಉದ್ಘಾಟನೆ ಮಾಡಲಿದ್ದಾರೆ. ಲೋಕಸಭೆ ಸ್ಫೀಕರ್ ಓಂ ಬಿರ್ಲಾ ಅವರು ಈಗಾಗಲೇ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನ ನೀಡಿದ್ದಾರೆ ಎಂದು ಮೇ 18ರಂದು ಲೋಕಸಭೆ ಸಚಿವಾಲಯ ತಿಳಿಸಿತ್ತು. ಅದರ ಬೆನ್ನಲ್ಲೇ ಪ್ರತಿಪ್ರಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಬೇಕೇ ಹೊರತು ಸರ್ಕಾರ ಮುಖ್ಯಸ್ಥರಲ್ಲ ಎನ್ನುತ್ತಿದ್ದಾರೆ. ಅದನ್ನೇ ಈಗ ರಾಹುಲ್ ಗಾಂಧಿ ಹೇಳಿದ್ದಾರೆ.
ಮೇ 19ರಂದು ಟ್ವೀಟ್ ಮಾಡಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ‘ಪ್ರಧಾನಿಯವರು ಯಾಕೆ ನೂತನ ಸಂಸತ್ ಭವನ ಉದ್ಘಾಟನೆ ಮಾಡುತ್ತಿದ್ದಾರೆ? ಪ್ರಧಾನಿಯವರು ಕಾರ್ಯಾಂಗದ ಮುಖ್ಯಸ್ಥರೇ ಹೊರತು ಶಾಸಕಾಂಗಕ್ಕೆ ಮುಖ್ಯಸ್ಥರಲ್ಲ. ಈ ಸಂಸತ್ ಭವನವನ್ನು ಲೋಸಕಭೆ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಉದ್ಘಾಟಿಸಬಹುದು. ಇದನ್ನು ಸಾರ್ವಜನಿಕರ ಹಣದಿಂದಲೇ ಕಟ್ಟಲಾಗಿದೆ. ಆದರೆ ಅದ್ಯಾಕೆ ಪ್ರಧಾನಿಯವರು ಹೀಗಾಡುತ್ತಿದ್ದಾರೆ. ಅವರ ಸ್ನೇಹಿತರು ತಮ್ಮ ಖಾಸಗಿ ಹಣದಿಂದ ನೂತನ ಸಂಸತ್ ಭವನ ಕಟ್ಟಿಸಿದಂತೆ ಆಡುತ್ತಿದ್ದಾರಲ್ಲ’ ಎಂದು ವ್ಯಂಗ್ಯವಾಡಿದ್ದರು.
ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಸೇಖರ್ ರಾಯ್ ಅವರು, ನೂತನ ಸಂಸತ್ ಭವನವನ್ನು ವೀರ ಸಾವರ್ಕರ್ ಜನ್ಮದಿನದಂದೇ ಉದ್ಘಾಟನೆ ಮಾಡುವುದನ್ನು ವಿರೋಧಿಸಿದ್ದರು. ನಮಗೆ ಸಂಸದೀಯ ಪ್ರಜಾಪ್ರಭುತ್ವವನ್ನು ಕೊಟ್ಟಿದ್ದು ಸಂವಿಧಾನ. ಪ್ರತಿವರ್ಷ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತೇವೆ. ಅಂದ ಮೇಲೆ ಈ ಸಂಸತ್ ಭವನವನ್ನು ಈ ವರ್ಷ ನವೆಂಬರ್ 26ರಂದೇ ಉದ್ಘಾಟನೆ ಮಾಡಬಹುದಲ್ಲ. ಅದು ಬಿಟ್ಟು ಮೇ 28ಕ್ಕೆ ಯಾಕೆ’ ಎಂದು ಪ್ರಶ್ನಿಸಿದ್ದರು. ಹಾಗೇ, ನೂತನ ಸಂಸತ್ ಭವನ ಮೇ 28ಕ್ಕೆ, ಸಾವರ್ಕರ್ ಜಯಂತಿಯಂದು ಉದ್ಘಾಟನೆಯಾಗುತ್ತಿರುವುದು ಮಹಾತ್ಮ ಗಾಂಧಿ, ಜವಾಹರ್ಲಾಲು ನೆಹರು, ಸುಭಾಷ್ ಚಂದ್ರ ಬೋಸ್ ಮತ್ತಿತರರಿಗೆಲ್ಲ ಅವಮಾನ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.
ಇನ್ನು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೂತನ ಸಂಸತ್ ಕಟ್ಟಡ ನಿರ್ಮಿಸಲಾಗಿದೆ. ಈ ನೂತನ ಕಟ್ಟಡ 65 ಸಾವಿರ ಚದರ ಮೀಟರ್ ಪ್ರದೇಶಕ್ಕೆ ವ್ಯಾಪಿಸಿದೆ. ಲೋಕಸಭೆ ಮತ್ತು ರಾಜ್ಯ ಸಭೆ ಕಾರ್ಯ-ಕಲಾಪಗಳಿಗಾಗಿ ಎರಡು ದೊಡ್ಡ-ವಿಶಾಲವಾದ ಸಭಾಂಗಣಗಳನ್ನು ಹೊಂದಿದೆ. ಒಂದು ಗ್ರಂಥಾಲಯ, ಸಂಸದರ ಕಚೇರಿಗಳು, ಸಭೆಗಳಿಗಾಗಿ ಸಮಿತಿ ರೂಮ್ಗಳು ಮತ್ತಿತರ ಸೌಕರ್ಯಗಳನ್ನು ಹೊಂದಿರಲಿದೆ. ಲೋಕಸಭೆ ಕಲಾಪ ನಡೆಯುವ ಹಾಲ್ಗಳಲ್ಲಿ 888 ಸಂಸದರು ಮತ್ತು ರಾಜ್ಯ ಸಭೆ ಕಲಾಪ ನಡೆಯುವಲ್ಲಿ 384 ಸಂಸದರು ಕುಳಿತುಕೊಳ್ಳಬಹುದಾಗಿದೆ. ಅಂದಹಾಗೆ, ಲೋಕಸಭೆ ಹಾಲ್ಅನ್ನು ರಾಷ್ಟ್ರಪಕ್ಷಿ ನವಿಲು ಮತ್ತು ರಾಜ್ಯಸಭೆಯನ್ನು ಕಮಲದ ಹೂವಿನ ಥೀಮ್ನಲ್ಲಿ ನಿರ್ಮಿಸಲಾಗಿದೆ.