ಚೆನ್ನೈ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಭರದಲ್ಲಿ ಪ್ರತ್ಯೇಕತೆಯ ಬಗ್ಗೆ ಪ್ರಸ್ತಾಪ ಮಾಡಿದ ತಮಿಳುನಾಡು ಆಡಳಿತ ಪಕ್ಷ ಡಿಎಂಕೆ ನಾಯಕ ಎ.ರಾಜಾ ಅವರ ಮಾತು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಪಕ್ಷ ಸ್ಪಷ್ಟೀಕರಣ ನೀಡಿದೆ.
ತಮಿಳುನಾಡಿನಲ್ಲಿ ಪಕ್ಷದ ಸ್ಥಳೀಯ ನಾಯಕರ ಸಭೆಯನ್ನುದೇಶಿಸಿ ಇತ್ತೀಚೆಗೆ ಮಾತನಾಡುವ ಸಂದರ್ಭದಲ್ಲಿ, “ಪ್ರಧಾನ ಮಂತ್ರಿ ಮತ್ತು ಅಮಿತ್ ಶಾ ಅವರನ್ನು ವಿನಮ್ರವಾಗಿ ಕೇಳುತ್ತಿದ್ದೇನೆ, ನಾಯಕ ಪೆರಿಯಾರ್ ಅವರ ಮಾರ್ಗವನ್ನು ನಾವು ತುಳಿಯುವಂತೆ ಮಾಡಬೇಡಿ. ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವಂತೆ ಮಾಡಬೇಡಿ. ನಮ್ಮ ರಾಜ್ಯಕ್ಕೆ ಸ್ವಾಯತ್ತತೆಯನ್ನು ನೀಡಿ, ಅಲ್ಲಿಯವರೆಗೂ ನಾವು ಸುಮ್ಮನಿರುವುದಿಲ್ಲ” ಎಂಬ ಅವರ ಮಾತು ಈಗ ವಿವಾದದ ಅಲೆಯನ್ನೆಬ್ಬಿಸಿದೆ. ಈ ಬಗ್ಗೆ ಡಿಎಂಕೆ ಸ್ಪಷ್ಟೀಕರಣವನ್ನೂ ನೀಡಿದ್ದು, ಕೇಂದ್ರ ಸರ್ಕಾರ ನಮಗೆ ಸರಿಯಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಹೀಗಾಗಿ ಎ. ರಾಜಾ ಹತಾಶೆಯಿಂದ ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಿದೆ.
ಈ ಬಗ್ಗೆ ರಾಜ್ಯದ ಪ್ರತಿಪಕ್ಷಗಳು ಟೀಕೆಯ ಮಳೆಗರೆದಿವೆ. ಡಿಎಂಕೆಯ ವಿಭಜನೆಯ ನೀತಿ ಈ ಹೇಳಿಕೆಯಲ್ಲಿ ವ್ಯಕ್ತವಾಗುತ್ತದೆ ಎಂದು ಹೇಳಿದ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣ ತಿರುಪತಿ, ʼಆಘಾತಕಾರಿ ಮತ್ತು ಅಚ್ಚರಿಯ ವಿಚಾರವೆಂದರೆ ಎ.ರಾಜಾ ಹೀಗೆಲ್ಲ ಮಾತಾಡಿದ್ದರೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೂಕ ಪ್ರೇಕ್ಷಕರಂತೆ ಇದ್ದಾರೆ. ಅವರ ಈ ಮೌನ ಸರಿಯಲ್ಲ. ದೇಶದ ಸಂವಿಧಾನಕ್ಕೆ ಬದ್ಧರಾಗಿ ಅವರು ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ್ದಾರೆʼ ಎಂದು ಟೀಕಿಸಿದರು.
ಇಂಥ ಮಾತುಗಳಿಂದ ಆ ಪಕ್ಷದ ಮನಸ್ಥಿತಿ ಏನು ಎಂಬುದು ಬಯಲಾಗುತ್ತಿದೆ. ರಾಜ್ಯದ ಸ್ವಾಯತ್ತತೆ ಮತ್ತು ಹಕ್ಕುಗಳ ನೆಪದಲ್ಲಿ ಒಡೆದಾಳುವ ನೀತಿಯನ್ನು ಆ ಪಕ್ಷ ಪ್ರತಿಪಾದಿಸುತ್ತಿದೆʼ ಎಂದು ಎಐಎಡಿಎಂಕೆಯ ಹಿರಿಯ ನಾಯಕ ರಾಜ್ ಸತ್ಯನ್ ಕಿಡಿಕಾರಿದ್ದಾರೆ. ತಮಿಳುನಾಡಿನ ದ್ರಾವಿಡ ಚಳುವಳಿಗಳ ಮುಂಚೂಣಿಯಲ್ಲಿದ್ದ ಟಿ. ಪೆರಿಯಾರ್ ಪ್ರತ್ಯೇಕ ತಮಿಳುನಾಡು ರಾಷ್ಟ್ರದ ಪ್ರತಿಪಾದಕರಾಗಿದ್ದರು. ಆದರೆ ಕ್ರಮೇಣ ಅವರ ಈ ನಿಲುವಿನಿಂದ ಹಿಂದೆ ಸರಿದ ಪಕ್ಷ, ದೇಶದ ಪ್ರಜಾಪ್ರಭುತ್ವ ಮತ್ತು ಏಕತೆಯನ್ನು ಬೆಂಬಲಿಸಿದ್ದರು.
ಇದನ್ನೂ ಓದಿ: Mekedatu | ಕೇಂದ್ರ ಸರಕಾರಕ್ಕೆ ತಮಿಳುನಾಡು ಸೂಚನೆ ನೀಡುವಂತಿಲ್ಲ: ಸಿಎಂ ಬೊಮ್ಮಾಯಿ ತಿರುಗೇಟು