Site icon Vistara News

Mohan Bhagwat: ಉದ್ಯೋಗದಲ್ಲಿ ಪ್ರತಿಷ್ಠೆ ಹುಡುಕಬೇಡಿ, ಅದರ ಹಿಂದೆ ಓಡಬೇಡಿ ಎಂದ ಆರ್​ಎಸ್​ಎಸ್​ ಮುಖ್ಯಸ್ಥ

Hindu spiritual community in South does much more than missionaries: Says Mohan Bhagwat

Hindu spiritual community in South does much more than missionaries: Says Mohan Bhagwat

ಮುಂಬಯಿ: ಉದ್ಯೋಗ ಮಾಡಬೇಕು ಎಂದು ಹೊರಟವರು ಯಾವುದೇ ತೆರನಾದ ಕೆಲಸವನ್ನೂ ಗೌರವಿಸಬೇಕು. ಕೆಲಸದ ವಿಷಯದಲ್ಲೂ ಮೇಲು-ಕೀಳು ಎನ್ನಬಾರದು. ಇವತ್ತು ಅದೆಷ್ಟೋ ಮಂದಿ ಕೆಲಸದಲ್ಲೂ ಘನತೆಗಾಗಿ ಹುಡುಕುತ್ತಾರೆ. ಇದೇ ಕಾರಣಕ್ಕೇ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ (Mohan Bhagwat) ಹೇಳಿದರು. ಅಷ್ಟೇ ಅಲ್ಲ, ‘ಪ್ರತಿಯೊಬ್ಬರೂ ಉದ್ಯೋಗಗಳ ಹಿಂದೆ ಓಡುವುದನ್ನು ಬಿಡಬೇಕು. ಎಲ್ಲ ತರಹದ ಕೆಲಸವನ್ನೂ ಗೌರವಿಸಿ ಒಪ್ಪಿಕೊಳ್ಳಬೇಕು. ಸಮಾಜಕ್ಕಾಗಿ ಮಾಡುವ ಕೆಲಸದಲ್ಲಿ ದೊಡ್ಡದು-ಸಣ್ಣದು ಎಂಬ ಭೇದ ಬೇಡ’ ಎಂದು ಸಲಹೆ ನೀಡಿದರು.

ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನೀವು ಯಾವ ಸ್ವರೂಪದ ಉದ್ಯೋಗ ಮಾಡುತ್ತಿದ್ದರೂ ಅದರೆಡೆಗೆ ಗೌರವ ಇರಬೇಕು. ನೀವು ಮಾಡುತ್ತಿರುವ ಕೆಲಸ ದೈಹಿಕ ಶ್ರಮದ್ದಾಗಿರಲಿ, ಬುದ್ಧಿಶಕ್ತಿ ಬೇಡುತ್ತಿರುವಂಥದ್ದಾಗಿರಲಿ, ಕಠಿಣ ಪರಿಶ್ರಮ ಬೇಕಾಗಿದ್ದಾಗಿರಲಿ, ಕೌಶಲ ಉಪಯೋಗಿಸುವಂಥದ್ದಾಗಿರಲಿ, ಒಟ್ಟಿನಲ್ಲಿ ಅದೇನೇ ಆಗಿರಲಿ ಮೊದಲು ಗೌರವಿಸಬೇಕು’ ಎಂದು ಹೇಳಿದರು.

ಇದನ್ನೂ ಓದಿ: Mohan Bhagwat: ಎಲ್ಲರೂ ಸಮಾನರು, ಪುರೋಹಿತರು ಜಾತಿ ಪದ್ಧತಿ ಹುಟ್ಟುಹಾಕಿದ್ದು ತಪ್ಪು; ಮೋಹನ್‌ ಭಾಗವತ್‌

‘ಪ್ರತಿಯೊಬ್ಬರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ. ಆದರೆ ನಮ್ಮಲ್ಲಿ ಸರ್ಕಾರಿ ಕೆಲಸಗಳು ಶೇ.10ರಷ್ಟು ಮತ್ತು ಉಳಿದ ಕೆಲಸಗಳು ಶೇ.20ರಷ್ಟು ಇವೆ. ಜಗತ್ತಿನ ಯಾವುದೇ ಸಮಾಜವೂ ಶೇ.30ಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿ ಉದ್ಯೋಗಗಳ ಹಿಂದೆ ಓಡುವುದನ್ನು ಬಿಟ್ಟು, ಘನತೆ-ಪ್ರತಿಷ್ಠೆಯ ಕೆಲಸವೆಂದೇ ಬೇಕು ಎಂದು ಕಾಯುವ ಬದಲು ಉಳಿದ ಕೈಕೆಲಸಗಳನ್ನೂ ಮಾಡಬೇಕು. ನಮ್ಮಲ್ಲಿ ಕೈಕೆಲಸಗಳಿಗೆ ಇನ್ನೂ ಸಾಕಷ್ಟು ಗೌರವ ಸಿಗುತ್ತಿಲ್ಲ’ ಎಂದು ಮೋಹನ್​ ಭಾಗವತ್ ಅಭಿಪ್ರಾಯಪಟ್ಟರು. ಸರ್ಕಾರ, ಇತರ ಕಂಪನಿ-ಕಚೇರಿಗಳು ಸೃಷ್ಟಿಸಿರುವ ಉದ್ಯೋಗಗಳೇ ಬೇಕೆಂದು ಕಾಯುತ್ತ, ನಿರುದ್ಯೋಗಿಗಳಾಗುವ ಬದಲು ಸ್ವಂತವಾಗಿಯೇ ಕೆಲಸ ಮಾಡಿ, ಹಾಗೇ, ಯಾವುದೇ ಸಣ್ಣ ಕೆಲಸಗಳನ್ನೂ ಅದು ಸಣ್ಣದು, ನಮ್ಮ ಪ್ರತಿಷ್ಠೆಗೆ ಹೊಂದುವುದಿಲ್ಲ ಎಂದು ಭಾವಿಸಬೇಡಿ ಎಂಬ ಸಂದೇಶವನ್ನು ಮೋಹನ್ ಭಾಗವತ್ ನೀಡಿದರು.

Exit mobile version