ಹೈದರಾಬಾದ್: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟರಾಗಿದ್ದ ಎನ್.ಟಿ.ರಾಮ ರಾವ್ ಅವರ ನಾಲ್ಕನೇ ಪುತ್ರಿ ಕೆ. ಉಮಾಮಹೇಶ್ವರಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಜ್ಯುಬಿಲಿ ಹಿಲ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಮಾ ಮಹೇಶ್ವರಿಗೆ ಹಲವು ತಿಂಗಳುಗಳಿಂದಲೂ ಅನಾರೋಗ್ಯವಿತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ (ಇಂದು) ಮಧ್ಯಾಹ್ನ 12 ಗಂಟೆ ಹೊತ್ತಿಗೆ ಉಮಾಮಹೇಶ್ವರಿ ತಮ್ಮ ಬೆಡ್‌ರೂಮ್ ಸೇರಿಕೊಂಡಿದ್ದರು. ಎಷ್ಟು ಹೊತ್ತಾದರೂ ಅವರು ಹೊರಬರದೆ ಇದ್ದಾಗ, ಪುತ್ರಿ ದೀಕ್ಷಿತಾ ಹೋಗಿ ನೋಡಿದ್ದಾರೆ. ಆಗ ಉಮಾ ಮಹೇಶ್ವರಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ. ಜ್ಯುಬಿಲಿ ಹಿಲ್ ಪೊಲೀಸರು ಮನೆಗೆ ಭೇಟಿಕೊಟ್ಟು ಪರಿಶೀಲನೆ ಮಾಡಿದ್ದಾರೆ. ಉಮಾ ಅವರ ಮೃತದೇಹವನ್ನು ಪೋಸ್ಟ್ ಮಾರ್ಟಮ್‌ಗೆ ಕಳಿಸಲಾಗಿದೆ. ಅನಾರೋಗ್ಯದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಇವರ ಪತಿ ಶ್ರೀನಿವಾಸ್ ಪ್ರಸಾದ್ ಉದ್ಯಮಿಯಾಗಿದ್ದು, ವಿಶಾಲ ಮತ್ತು ದೀಕ್ಷಿತಾ ಎಂಬ ಪುತ್ರಿಯರು ಇದ್ದಾರೆ. ಉಮಾ ಮಹೇಶ್ವರಿ ಮೃತಪಟ್ಟ ಬೆನ್ನಲ್ಲೇ ಅವರ ಮನೆಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ಆಗಮಿಸಿದ್ದಾರೆ. ನಟ ನಂದಮೂರಿ ಕಲ್ಯಾಣರಾಮ್ ಕೂಡ ಬಂದಿದ್ದಾರೆ.
ಎನ್‌ಟಿಆರ್ ಅವರಿಗೆ ಒಟ್ಟು 12 ಮಕ್ಕಳು. ಅದರಲ್ಲಿ 8 ಮಂದಿ ಗಂಡುಮಕ್ಕಳು ಮತ್ತು ನಾಲ್ವರು ಪುತ್ರಿಯರು. ಅವರಲ್ಲಿ ಹರಿಕೃಷ್ಣ ಮತ್ತು ಬಾಲಕೃಷ್ಣ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದು, ಜನಪ್ರಿಯತೆ ಗಳಿಸಿದ್ದಾರೆ. ನಾಲ್ವರು ಪುತ್ರಿಯರಾದ ವನೇಶ್ವರಿ, ಪುರಂದರೇಶ್ವರಿ, ಲೋಕೇಶ್ವರಿ ಮತ್ತು ಉಮಾ ಮಹೇಶ್ವರಿ ಅವರಲ್ಲಿ ಉಮಾ ಕಿರಿಯರು. ಇವರ ಜೀವನ ಮೊದಲಿನಿಂದಲೂ ಕಷ್ಟದಲ್ಲೇ ಇತ್ತು. ಮದುವೆಯಾದ ಬಳಿಕ ಪತಿಯಿಂದ ತೀವ್ರ ಕಿರುಕುಳಕ್ಕೆ ಒಳಗಾಗಿದ್ದರು. ಬಳಿಕ ಆತನಿಗೆ ವಿಚ್ಛೇದನ ಕೊಟ್ಟು ಬೇರೆಯೊಬ್ಬರನ್ನು ವಿವಾಹವಾಗಿದ್ದರು.
ಇದನ್ನೂ ಓದಿ: ಆಂಧ್ರ ಸ್ಟೈಲಲ್ಲಿ ಮಹಾ ಪಾಲಿಟಿಕ್ಸ್: ಎನ್‌ಟಿಆರ್ ಅವರನ್ನು ಚಂದ್ರಬಾಬು ನಾಯ್ಡು ಕಿತ್ತೆಸೆದಂತೆ ಇಲ್ಲೂ ಆಗುತ್ತಾ?