ನವ ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಕೋರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇತ್ತೀಚೆಗೆ ಜ್ಞಾನವಾಪಿ ಮಸೀದಿ ಕೇಸ್ ಬಗ್ಗೆ ಮಾತನಾಡಲು ಸುದ್ದಿ ಮಾಧ್ಯಮದ ಡಿಬೇಟ್‌ವೊಂದರಲ್ಲಿ ಪಾಲ್ಗೊಂಡಿದ್ದ ನೂಪುರ್ ಶರ್ಮಾ, ಆ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಮಾನ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯಗಳು ತಿರುಗಿಬಿದ್ದವು. ಇವರ ಹೇಳಿಕೆ ವಿರೋಧಿಸಿ, ದೇಶದ ಅನೇಕ ಕಡೆ ಹಿಂಸಾತ್ಮಕ ಪ್ರತಿಭಟನೆ ನಡೆಯಿತು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲಾಯಿತು.
ದೇಶದೊಳಗಿನ ಮುಸ್ಲಿಮರಷ್ಟೇ ಅಲ್ಲ, ವಿಶ್ವಾದ್ಯಂತ ಮುಸ್ಲಿಂ ರಾಷ್ಟ್ರಗಳೂ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದವು. ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನವನ್ನೂ ನಡೆಸಿದ್ದವು. ಕತಾರ್, ಸೌದಿ ಅರೇಬಿಯಾ, ಕುವೈತ್‌ಗಳು ಅಲ್ಲಿರುವ ಭಾರತೀಯ ರಾಯಭಾರಿಗಳಿಗೆ ನೋಟಿಸ್ ನೀಡಿ, ಈ ಹೇಳಿಕೆಯ ಬಗ್ಗೆ ಸ್ಪಷ್ಟನೆಯನ್ನೂ ಕೇಳಿದ್ದವು. ಒಟ್ಟಾರೆ ನೂಪುರ್ ಶರ್ಮಾ ಹೇಳಿಕೆಯಿಂದ ದೇಶದ ಕಾನೂನು-ಸುವ್ಯವಸ್ಥೆ ಹದಗೆಡುವ ಜತೆ, ನಷ್ಟವೂ ಉಂಟಾಗಿದೆ.
ಇದೆಲ್ಲದರ ಮಧ್ಯೆ ನೂಪುರ್ ಶರ್ಮಾ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿ ತಮ್ಮ ವಿರುದ್ಧ ದೇಶದ ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಫ್‌ಐಆರ್‌ಗಳನ್ನೆಲ್ಲ ದೆಹಲಿಗೆ ವರ್ಗಾಯಿಸಬೇಕು. ಗಂಭೀರ ಸ್ವರೂಪದ ಜೀವ ಬೆದರಿಕೆ ಇರುವುದರಿಂದ ವಿಚಾರಣೆಗೆಂದು ದೆಹಲಿಯಿಂದ ಆಚೆಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದರು. ನೂಪುರ್ ಶರ್ಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮನ್ಸ್ ಕೊಟ್ಟಿದ್ದಾರೆ. ಆದರೆ ಅವರು ಮುಂಬೈಗೆ ಬಂದಿಲ್ಲ. ಅಷ್ಟಲ್ಲದೆ, ಎಲ್ಲಿಯೂ ಕಾಣುತ್ತಿಲ್ಲ ಎಂದೂ ಹೇಳಲಾಗಿದೆ. ಈ ಮಧ್ಯೆ ನೂಪುರ್ ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್‌ಗೆ ಮನವಿ ಅರ್ಜಿ ಕೊಟ್ಟಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್, ʼನೂಪುರ್ ಶರ್ಮಾ ಪಾಲ್ಗೊಂಡ ಡಿಬೇಟ್‌ನ್ನು ನಾವು ವೀಕ್ಷಿಸಿದ್ದೇವೆ. ಅದರಲ್ಲಿ ನೂಪುರ್ ಶರ್ಮಾರನ್ನು ಹೇಗೆ ಪ್ರಚೋದಿಸಲಾಯಿತು ಎಂಬುದನ್ನೂ ನೋಡಿದ್ದೇವೆ. ಆದರೆ ನಂತರ ಅವಳಾಡಿದ ಮಾತು, ಕೊನೆಯಲ್ಲಿ ನಾನೊಬ್ಬ ವಕೀಲೆ ಎಂದು ಹೇಳಿಕೊಂಡಿದ್ದೆಲ್ಲ ನಾಚಿಕೆಗೇಡು. ಆಕೆಯ ಹೇಳಿಕೆಯಿಂದ ಇಡೀ ದೇಶದಲ್ಲಿ ಕಿಡಿ ಹೊತ್ತಿಕೊಂಡಿತು. ಏನೆಲ್ಲ ಪ್ರತಿಭಟನೆ, ಹಿಂಸಾಚಾರ, ನಷ್ಟವಾಯಿತೋ ಅದೆಲ್ಲದಕ್ಕೂ ನೂಪುರ್ ಶರ್ಮಾ ಒಬ್ಬರೇ ಸಂಪೂರ್ಣ ಹೊಣೆ ಹೊರತು ಇನ್ಯಾರೂ ಅಲ್ಲ. ತಕ್ಷಣವೇ ಅವರು ದೇಶದ ಕ್ಷಮೆ ಕೋರಲಿʼ ಎಂದು ಹೇಳಿದ್ದಾರೆ.
ಅಧಿಕಾರದ ಅಮಲು !
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇಂದು ಅರ್ಜಿ ವಿಚಾರಣೆ ವೇಳೆ ನೂಪುರ್ ಶರ್ಮಾರಿಗೆ ಕಠಿಣವಾಗಿಯೇ ಬೈದಿದ್ದಾರೆ. “ಇಂಥವರಿಗೆಲ್ಲ ಅಧಿಕಾರದ ಅಮಲು. ಅಹಂಕಾರದಿಂದ ಆಡಿದ ಮಾತುಗಳು ಇವು. ಏನು ಅಧಿಕಾರವಿದೆ ಎಂದು ಇವರು ಹೀಗೆ ಹೇಳಿಕೆ ಕೊಟ್ಟಿದ್ದಾರೆ? ಇನ್ನೊಂದು ಧರ್ಮವನ್ನು ಗೌರವಿಸದ ಇವರೆಲ್ಲ ಧರ್ಮಿಷ್ಠರೇ ಅಲ್ಲ. ಅಗ್ಗದ ಪ್ರಚಾರ, ರಾಜಕೀಯ ಕಾರಣಕ್ಕಾಗಿಯೇ ಮಾತಾಡುತ್ತಾರೆ ಎಂದು ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ. “ನೂಪುರ್ ಶರ್ಮಾಗೆ ಬೆದರಿಕೆಯಿದೆ ಎಂದು ಅರ್ಜಿಯಲ್ಲಿ ಹೇಳುತ್ತಿದ್ದೀರಿ, ಆದರೆ ವಾಸ್ತವದಲ್ಲಿ, ತಮ್ಮ ಹಿಡಿತವಿಲ್ಲದ ನಾಲಿಗೆಯಿಂದ ಇಡೀ ದೇಶದ ಭದ್ರತಾ ವ್ಯವಸ್ಥೆಗೆ ಬೆದರಿಕೆ ಒಡ್ಡಿದ್ದು ಅವರು” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಉದಯಪುರದಲ್ಲಿ ನಡೆದ ಟೇಲರ್ ಹತ್ಯೆಯನ್ನೂ ಇದೇ ವೇಳೆ ಉಲ್ಲೇಖ ಮಾಡಿದ ಸುಪ್ರೀಂಕೋರ್ಟ್, ಶರ್ಮಾ ಆವೇಶದಿಂದ, ಅವಿವೇಕದಿಂದ ಆಡಿದ ಮಾತುಗಳೇ ಉದಯಪುರ ಘಟನೆಗೆ ಕಾರಣ ಎಂದು ಹೇಳಿದೆ. ಹಾಗೇ, ಎಫ್‌ಐಆರ್‌ಗಳನ್ನೆಲ್ಲ ದೆಹಲಿಗೇ ವರ್ಗಾಯಿಸಿಕೊಡಿ ಎಂಬ ಮನವಿಯನ್ನೂ ತಿರಸ್ಕರಿಸಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ ಹಿಂದು ಯುವಕನ ಶಿರಚ್ಛೇದ; ರಸ್ತೆ ಮಧ್ಯೆ ರಕ್ತದೋಕುಳಿ