ತಿರುವನಂತಪುರಂ: ವಿಮಾನದಲ್ಲಿ ಅಸ್ವಸ್ಥನಾಗಿ, ಕುಸಿದು ಬಿದ್ದಿದ್ದ ಸೈನಿಕನನ್ನು ನರ್ಸ್ವೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿಸಿದ್ದಾರೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನವೆಂಬರ್ 6ರಂದು, 32 ವರ್ಷದ ಸುಮನ್ ಎಂಬ ಯೋಧ ಕೇರಳದ ನೀಲಾಂಬುರ್ನಿಂದ ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದರು. ವಿಮಾನ ಟೇಕ್ ಆಫ್ ಆಗಿ 20ನಿಮಿಷದಲ್ಲಿ ಆತನ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ನೋಡನೋಡುತ್ತಿದ್ದಂತೆ ಕುಸಿದುಬಿದ್ದಿದ್ದರು.
ವಿಮಾನ ಸಿಬ್ಬಂದಿ, ಉಳಿದ ಪ್ರಯಾಣಿಕರೆಲ್ಲ ಆತಂಕದಿಂದ ಏನು ಮಾಡಬೇಕು? ಎಂದು ಕಂಗಾಲಾಗಿ ನಿಂತಿದ್ದರು. ಯಾರಾದರೂ ವೈದ್ಯಕೀಯ ಸಿಬ್ಬಂದಿ ಇದ್ದೀರಾ? ಎಂದು ಪೈಲೆಟ್ ಮೈಕ್ನಲ್ಲಿ ಕೇಳುತ್ತಿದ್ದರು. ಆಗ ಮೊದಲು ಯೋಧನಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿದ್ದು 56 ವರ್ಷದ ನರ್ಸ್ಪಿ.ಗೀತಾ. ಇವರು ಮತ್ತು ವಿಮಾನದಲ್ಲಿ ಇದ್ದ ಇನ್ನಿತರ ಕೆಲವು ಜ್ಯೂನಿಯರ್ ವೈದ್ಯರು ಸೇರಿ, ಯೋಧನಿಗೆ ಸಿಪಿಆರ್ (Cardiopulmonary Resuscitation) ಚಿಕಿತ್ಸೆ ನೀಡಿ ಮರುಜೀವ ಕೊಟ್ಟಿದ್ದಾರೆ.
ನರ್ಸ್ ಗೀತಾ ಕೇರಳದ ಕೊಯಿಕ್ಕೋಡ್ನವರು. 2020ರ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತರು. 2020ರಲ್ಲಿ ಅವರು ವರ್ಚ್ಯುವಲ್ ಆಗಿ ಪ್ರಶಸ್ತಿ ಸನ್ಮಾನ ಪಡೆದಿದ್ದರು. ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಕೈಯಲ್ಲಿ ನೇರವಾಗಿ ಸನ್ಮಾನ ಪಡೆದು, ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಕೇರಳದಿಂದ ದೆಹಲಿಗೆ ತೆರಳುತ್ತಿದ್ದರು. ಇದೇ ವೇಳೆ ಯೋಧ ಸುಮನ್ರನ್ನು ಪ್ರಾಣಾಪಾಯದಿಂದ ಪಾರು ಮಾಡಿ, ಶ್ಲಾಘನೆಗೆ ಪಾತ್ರರಾಗಿದ್ದಾರೆ. ಗೀತಾ ಈ ಮೊದಲು ಕೊಯಿಕ್ಕೊಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದಾರೆ .
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನರ್ಸ್ ಗೀತಾ, ’ವಿಮಾನದಲ್ಲಿ ಯೋಧ ಅಸ್ವಸ್ಥನಾದ ಬಗ್ಗೆ ಅನೌನ್ಸ್ಮೆಂಟ್ ಕೇಳಿದೆ. ಕೂಡಲೇ ಕಾರ್ಯಪ್ರವೃತ್ತನಾದೆ. ನಂತನ ನನ್ನೊಂದಿಗೆ ಇಬ್ಬರು ವೈದ್ಯರು ಸೇರಿಕೊಂಡರು. ಸುಮನ್ ನಾಡಿಮಿಡಿತ ಮತ್ತು ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗಿತ್ತು. ಉಸಿರಾಟವನ್ನೂ ಅವರು ನಿಲ್ಲಿಸಿದ್ದರು. ನಾವು ಕೂಡಲೇ ಸಿಪಿಆರ್ ಚಿಕಿತ್ಸೆ ನೀಡಿದೆವು. ಆಗ ಅವರು ಎಚ್ಚರಗೊಂಡರು. ಆಮೇಲೆ ಅವರಿಗೆ ತಿಂಡಿಯನ್ನೂ ತಿನ್ನಿಸಲಾಯಿತು’ ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಸುಮನ್ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗೀತಾ ಮೊದಲಿನಿಂದಲೂ ವೃತ್ತಿನಿಷ್ಠೆಗೆ ಹೆಸರಾದವರು. 2018 ಕೇರಳಕ್ಕೆ ನಿಫಾ ವೈರಸ್ ಕಾಲಿಟ್ಟಾಗ, 2019ರಲ್ಲಿ ಕೇರಳ ಪ್ರವಾಹ, ಕೊವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಗೀತಾ ಅದನ್ನು ನಿರ್ವಹಿಸಿದ ರೀತಿ, ಅವರ ಕಾರ್ಯ ವೈಖರಿಯನ್ನು ಪರಿಗಣಿಸಿಯೇ ಅವರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಲಾಗಿದೆ. ಗೀತಾ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ಕೇಳಿಬರುತ್ತಿದೆ.
ಸಿಪಿಆರ್ ಅಥವಾ cardiopulmonary resuscitation -ಹೀಗೆಂದರೆ ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ.. ಹೃದಯ ಸ್ತಂಭನವಾದಾಗ ಆ ವ್ಯಕ್ತಿಯ ದೇಹದೊಳಗೆ ರಕ್ತ ಸಂಚಾರ ಸಂಪೂರ್ಣ ನಿಂತು ಹೋಗುತ್ತದೆ. ಇದರಿಂದಾಗಿ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಆತ ಕುಸಿದು ಬೀಳುತ್ತಾನೆ. ಹೀಗಾದಾಗ ಆತನ ಎದೆಯ ಮೇಲೆ ನಮ್ಮ ಎರಡೂ ಹಸ್ತಗಳನ್ನು ಇಟ್ಟು ಒತ್ತಬೇಕು. ರೋಗಿಯ ಸೆಟೆದುಕೊಂಡ ಎದೆ ಸ್ವಲ್ಪ ಒಳಭಾಗಕ್ಕೆ ಹೋಗುವಷ್ಟು ಗಟ್ಟಿಯಾಗಿ ಒತ್ತುತ್ತಾ ಹೋಗಬೇಕು. ಈ ಕ್ರಿಯೆ ತಕ್ಕಮಟ್ಟಿನ ವೇಗದಲ್ಲಿರಬೇಕು. ಆಗ ರಕ್ತಚಲನೆ ಮತ್ತೆ ಶುರುವಾಗಿ ಹೃದಯ ಪುನಶ್ಚೇತನಗೊಳ್ಳುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಸಿಪಿಆರ್ ಅಥವಾ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ಎನ್ನುತ್ತಾರೆ.
ಇದನ್ನೂ ಓದಿ: Viral news | ತನ್ನಜ್ಜ ಪಡೆದ ಪುಸ್ತಕವನ್ನು 84 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿಸಿ ದಂಡ ಕಟ್ಟಿದ ಮೊಮ್ಮಗ!