ನವ ದೆಹಲಿ: ಸುಪ್ರೀಂಕೋರ್ಟ್ನ ಈಗಿನ ಮುಖ್ಯ ನ್ಯಾಯಮೂರ್ತಿ (CJI) ಎನ್.ವಿ.ರಮಣ ಅಧಿಕಾರ ಅವಧಿ ಆಗಸ್ಟ್ 26ರಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಅವರು ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸಿಜೆಐ ನಿವೃತ್ತರಾಗುವಾಗ ಮುಂದಿನ ಸಿಜೆಐ ಹೆಸರನ್ನು ಶಿಫಾರಸು ಮಾಡುವುದು ನಿಯಮ. ಅದರಂತೆ ಈಗ ಎನ್. ವಿ.ರಮಣ ಅವರು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಹೆಸರನ್ನು ಸೂಚಿಸಿದ್ದಾರೆ. ಇವರ ಹೆಸರನ್ನು ಬರೆದು, ತಮ್ಮ ಸಹಿ ಹಾಕಿ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಂತೆ ಯು.ಯು. ಲಲಿತ್ ಅವರು ಆಗಸ್ಟ್ 27ರಂದು, ಸುಪ್ರೀಂಕೋರ್ಟ್ನ 49ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ, ಹೈಕೋರ್ಟ್ ಜಡ್ಜ್ಗಳ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಪಟ್ಟಂತೆ ಆಗಸ್ಟ್ 2ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆ ನಡೆದಿತ್ತು. ಸುಮಾರು 75 ನಿಮಿಷ ನಡೆದಿದ್ದ ಈ ಸಭೆಯಲ್ಲಿ ಅಂತಿಮ ನಿರ್ಣಯ ಯಾವುದೂ ಹೊರಬಿದ್ದಿರಲಿಲ್ಲ. ಇದರ ಬೆನ್ನಲ್ಲೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಸಿಜೆಐ ಎನ್ ವಿ ರಮಣರಿಗೆ ಆಗಸ್ಟ್ 3ರಂದು ಪತ್ರ ಬರೆದು, ‘ನಿಮ್ಮ ಉತ್ತರಾಧಿಕಾರಿ ಹೆಸರನ್ನು ಶೀಘ್ರವೇ ಶಿಫಾರಸು ಮಾಡಿ’ ಎಂದು ಹೇಳಿದ್ದರು.
ಸದ್ಯ ಸುಪ್ರೀಂಕೋರ್ಟ್ನಲ್ಲಿ ಸಿಜೆಐ ಎನ್.ವಿ.ರಮಣರನ್ನು ಬಿಟ್ಟರೆ ಎರಡನೇ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ . ಇವರು ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭ ಮಾಡಿದ್ದು 1983ರಲ್ಲಿ. 1985ರವರೆಗೂ ಬಾಂಬೆ ಹೈಕೋರ್ಟ್ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಅದಾಗಿ ಒಂದು ವರ್ಷದಲ್ಲಿ 1986ರಿಂದ ದೆಹಲಿ ಕೋರ್ಟ್ನಲ್ಲಿ ಪ್ರ್ಯಾಕ್ಟೀಸ್ ಪ್ರಾರಂಭಿಸಿದರು. 2004ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಹಲವು ಗಣ್ಯರ, ಪ್ರಮುಖ ಸಂಸ್ಥೆಗಳ ಕಾನೂನು ಸಲಹೆಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಸುಪ್ರೀಂಕೋರ್ಟ್ನ ಕಾನೂನು ಸೇವಾ ಸಮಿತಿಗೆ ಎರಡು ಅವಧಿಗೆ ಸದಸ್ಯರಾಗಿದ್ದರು. ಅಂದಹಾಗೇ, ಇವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಮೂರು ತಿಂಗಳ ಕಾಲವಷ್ಟೇ ಕಾರ್ಯನಿರ್ವಹಿಸಲಿದ್ದಾರೆ. 2022ರ ನವೆಂಬರ್ 8ರಂದು ನಿವೃತ್ತಿಯಾಗಲಿದ್ದಾರೆ.
ಇದನ್ನೂ ಓದಿ: ಉತ್ತರಾಧಿಕಾರಿಯನ್ನು ಶಿಫಾರಸು ಮಾಡಿ ಎಂದು ಸಿಜೆಐ ರಮಣಗೆ ಪತ್ರ ಬರೆದ ಕೇಂದ್ರ ಕಾನೂನು ಸಚಿವ