Site icon Vistara News

Chetan Ahimsa: ಹಿಂದುತ್ವ ವಿರೋಧಿ ಹೇಳಿಕೆಯಿಂದಲೇ ವಿವಾದ ಸೃಷ್ಟಿಸುವ ಚೇತನ್​ ಅಹಿಂಸಾಗೆ ಸಂಕಷ್ಟ; ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ

OCI Card Of Actor Chetan Ahimsa cancelled

#image_title

ನವ ದೆಹಲಿ: ಸದಾ ಹಿಂದುಗಳು, ಹಿಂದುತ್ವ, ಬ್ರಾಹ್ಮಣ್ಯವನ್ನು ಟೀಕಿಸುತ್ತಲೇ ಸುದ್ದಿಯಾಗುತ್ತಿರುವ ನಟ ಚೇತನ್ ಅಹಿಂಸಾ (Chetan Ahimsa) ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ವೀಸಾ ರದ್ದು ಮಾಡಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ. ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿ, ಮೈಮೇಲೆ ಎಳೆದುಕೊಳ್ಳುವ ನಟ ಚೇತನ್ ಅಹಿಂಸಾ ಮಾರ್ಚ್ 20ರಂದು ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಹೇಳುವ ಮೂಲಕ ಹಿಂದುತ್ವಕ್ಕೆ ಅಪಮಾನ ಮಾಡಿದ್ದರು. ಬಜರಂಗದಳ ಮತ್ತಿತರ ಹಿಂದೂ ಸಂಘಟನೆಗಳೂ ನೀಡಿದ ದೂರಿನ ಅನ್ವಯ ಮರುದಿನ ಅಂದರೆ ಮಾ.21ರಂದು ಚೇತನ್​ ಅಹಿಂಸಾರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಳಿಕ ಅವರು ಜಾಮೀನು ಪಡೆದು ಹೊರಬಂದಿದ್ದರು.

ಹೀಗೆ ಹಿಂದುತ್ವದ ವಿರುದ್ಧ ಹೇಳಿಕೆ ನೀಡುತ್ತ, ಶಾಂತಿ ಭಂಗ ಮಾಡುತ್ತಿರುವ ನಟ ಚೇತನ್ ಅಹಿಂಸಾರಿಗೆ ಕೇಂದ್ರ ಸರ್ಕಾರ ಈಗೊಂದು ಬಿಗ್ ಶಾಕ್ ನೀಡಿದೆ. ಅವರ ಭಾರತದ ಸಾಗರೋತ್ತರ ಪೌರತ್ವ (OCI) ಮಾದರಿಯ ವೀಸಾವನ್ನು ರದ್ದು ಮಾಡಿದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಚೇತನ್​ ಅಹಿಂಸಾರಿಗೆ ಪತ್ರ ಕಳಿಸಲಾಗಿದ್ದು, ‘ಪತ್ರ ತಲುಪಿದ 15ದಿನಗಳ ಒಳಗೆ ನಿಮ್ಮ ಬಳಿ ಇರುವ ಒಐಸಿ ಕಾರ್ಡ್​ನ್ನು ವಾಪಸ್​ ನೀಡಿ’ ಎಂದು ಆದೇಶಿಸಲಾಗಿದೆ.

ನಟ ಚೇತನ್​ ಅಮೆರಿಕ ಪೌರತ್ವ ಹೊಂದಿದ್ದಾರೆ. ಅವರು ಬಾಲ್ಯವನ್ನೆಲ್ಲ ಕಳೆದಿದ್ದು ಶಿಕಾಗೋದಲ್ಲಿ. ಶಿಕ್ಷಣ ಮುಗಿಸಿದ ಬಳಿಕ 2005ರಲ್ಲಿ ಭಾರತಕ್ಕೆ ಬಂದಿದ್ದಾರೆ. 2018ರಲ್ಲಿ ಅವರಿಗೆ ಓಐಸಿ (Overseas Citizen of India) ಕಾರ್ಡ್ ಕೊಡಲಾಗಿತ್ತು. ಹಿಂದುತ್ವ-ಬ್ರಾಹ್ಮಣ್ಯದ ವಿಚಾರದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಚೇತನ್ ಅಹಿಂಸಾ 2022ರಲ್ಲಿ ಕರ್ನಾಟಕದಲ್ಲಿ ‘ಹಿಜಾಬ್ ಗಲಾಟೆ’ ನಡೆಯುತ್ತಿದ್ದಾಗಲೂ ನಾಲಿಗೆ ಹರಿಬಿಟ್ಟಿದ್ದರು. ಈ ಹಿಜಾಬ್ ವಿವಾದದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಅವರ ಬಗ್ಗೆಯೂ ಅವಹೇಳನ ಮಾಡಿದ್ದರು. ‘2020ರಲ್ಲಿ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಕೃಷ್ಣ ದೀಕ್ಷಿತ್​ ಅವರು ರೇಪ್​ ಮಾಡಿದ್ದ ಆರೋಪಿಗೆ ನಿರೀಕ್ಷಣಾ ಜಾಮೀನು ಕೊಟ್ಟಿದ್ದರು. ಸ್ತ್ರೀಯರ ಬಗ್ಗೆ ಅಷ್ಟು ದ್ವೇಷ ಇರುವ ನ್ಯಾಯಾಧೀಶರು ಈಗ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್​ಗೆ ಅವಕಾಶ ಕೊಡಬೇಕೇ? ಕೊಡಬೇಡವೇ? ಎಂಬ ಬಗ್ಗೆ ಏನು ತೀರ್ಪು ನೀಡಬಲ್ಲರು?‘ ಎಂದು ಚೇತನ್ ಪ್ರಶ್ನಿಸಿದ್ದರು.

ಕರ್ನಾಟಕ ಹೈಕೋರ್ಟ್​​ನ ನ್ಯಾಯಮೂರ್ತಿ ಬಗ್ಗೆ ನಿಂದನಾತ್ಮಕ ಟ್ವೀಟ್ ಮಾಡಿದ್ದ ಚೇತನ್​​ಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) 2022ರ ಜೂನ್​ನಲ್ಲಿ ಶೋಕಾಸ್ ನೋಟಿಸ್​ ಕೊಟ್ಟಿತ್ತು. ‘ನೀವು ಪದೇಪದೆ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತ, ಅಂಥ ಚಳವಳಿ, ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೀರಿ ಮತ್ತು ನ್ಯಾಯಮೂರ್ತಿ ವಿರುದ್ಧವೇ ಅವಹೇಳನಕಾರಿ ಮಾತುಗಳನ್ನಾಡಿದ್ದೀರಿ. ಹೀಗಾಗಿ ನಿಮ್ಮ ಓಐಸಿ ಕಾರ್ಡ್​​ನ್ನು ನಾವೇಕೆ ರದ್ದುಗೊಳಿಸಬಾರದು?’ ಎಂದು ನೋಟಿಸ್​​ನಲ್ಲಿ ಪ್ರಶ್ನೆ ಮಾಡಿತ್ತು. ಅದಕ್ಕೆ ಪ್ರತಿ ಉತ್ತರ ಕೊಟ್ಟಿದ್ದ ಚೇತನ್​ ‘ನಾನು ಹಲವು ವರ್ಷಗಳಿಂದಲೂ ಭಾರತದಲ್ಲಿಯೇ ವಾಸವಾಗಿದ್ದೇನೆ. ಇಲ್ಲಿಯೇ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದೇನೆ. ನನ್ನ ಸಿನಿಮಾಗಳೂ ಭಾರತದಲ್ಲಿಯೇ ನಿರ್ಮಾಣವಾಗುತ್ತಿವೆ. ಅಷ್ಟೇ ಅಲ್ಲ, ನಾನು ಭಾರತೀಯಳನ್ನು ಮದುವೆಯಾಗಿದ್ದೇನೆ. ಹೀಗಾಗಿ ಓಐಸಿ ಕಾರ್ಡ್ ರದ್ದು ಮಾಡಬಾರದು’ ಎಂದು ಹೇಳಿದ್ದರು. ಆದರೆ ಚೇತನ್​ ಅಹಿಂಸಾ ನೀಡಿದ ಉತ್ತರ ತೃಪ್ತಿದಾಯಕವಾಗಿಲ್ಲ ಎಂದು ಹೇಳಿರುವ ಕೇಂದ್ರ ಗೃಹ ಇಲಾಖೆ, ಅವರ ಭಾರತೀಯ ಸಾಗರೋತ್ತರ ಪೌರತ್ವ ರದ್ದು ಮಾಡಲು ಆದೇಶ ನೀಡಿದೆ.

ಇದನ್ನೂ ಓದಿ: Actor Chetan Ahimsa : ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌; ನಟ ಚೇತನ್‌ ಅಹಿಂಸಾ ಅರೆಸ್ಟ್‌

ಚೇತನ್ ಅಹಿಂಸಾ ಪ್ರತಿಕ್ರಿಯೆ
ತಮ್ಮ ವೀಸಾ ರದ್ದುಗೊಳಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಚೇತನ್ ಅಹಿಂಸಾ ‘ಇದು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಹೆಣೆಯಲಾದ ಒಂದು ಬಲೆ. ನಾನು ಕಾನೂನು ವಿರುದ್ಧವಾಗಿ ಏನನ್ನೂ ಮಾಡಿಲ್ಲ. ವೀಸಾ ಹಿಂದಿರುಗಿಸಲು ನನಗೆ 15ದಿನಗಳ ಅವಕಾಶ ಕೊಟ್ಟಿದ್ದಾರೆ. ನಾನು ಈ ಆದೇಶಕ್ಕೆ ಹೈಕೋರ್ಟ್​ನಿಂದ ತಡೆ ತರುತ್ತೇನೆ, ಕಾನೂನು ಬದ್ಧವಾಗಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಅವರು ವೀಸಾ ರದ್ದಾಗಿದ್ದನ್ನು ಪುನಃ ಸಕ್ರಿಯಗೊಳಿಸಿಕೊಳ್ಳದೆ ಇದ್ದಲ್ಲಿ, ಅವರು ಭಾರತದಿಂದ ಹೊರಹೋಗಬೇಕಾಗುತ್ತದೆ.

Exit mobile version