Site icon Vistara News

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್​; ತೃತೀಯ ರಂಗದೊಂದಿಗೆ ಇಲ್ಲ ಮೈತ್ರಿ

Odisha chief minister Naveen Patnaik

#image_title

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಅವರು ಇಂದು ದೆಹಲಿಗೆ ತೆರಳಿ, ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಬಳಿಕ ಮಾತನಾಡಿದ ಅವರು ‘2024ರ ಲೋಕಸಭಾ ಚುನಾವಣೆ ಸಮಯದಲ್ಲಿ ತೃತೀಯ ರಂಗದೊಂದಿಗೆ ಕೈಜೋಡಿಸುವ ಮಾತೇ ಇಲ್ಲ’ ಎಂದು ಹೇಳಿದರು. ಅಷ್ಟೇ ಅಲ್ಲ, ತೃತೀಯ ರಂಗ ರಚನೆ ಸಾಧ್ಯತೆಯೇ ತುಂಬ ಕಡಿಮೆ ಇದೆ ಎಂದರು.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಉದ್ದೇಶ ಇಟ್ಟುಕೊಂಡು, ಜೆಡಿಯು, ಟಿಎಂಸಿ, ಎನ್​ಸಿಪಿ, ಸಮಾಜವಾದಿ ಪಾರ್ಟಿ ಸೇರಿ ಮತ್ತಿತರ ಪಕ್ಷಗಳೆಲ್ಲ ಸೇರಿ ತೃತೀಯ ರಂಗ ರಚಿಸುವ ಘನ ಉದ್ದೇಶವನ್ನು ಹೊರಹಾಕಿದ್ದರು. ಅದಕ್ಕಾಗಿ ಎಲ್ಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರೊಟ್ಟಿಗೂ ಅವರು ಮಾತುಕತೆ ನಡೆಸುತ್ತಿದ್ದರು ಆದರೆ ಬಳಿಕ ಟಿಎಂಸಿ ಆ ಕೊಂಡಿ ಕಳಚಿಕೊಂಡಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೂ ಇತ್ತೀಚೆಗೆ ಎನ್​ಡಿಎ ಒಕ್ಕೂಟದಿಂದ ಹೊರಬಿದ್ದಿರುವ ನಿತೀಶ್ ಕುಮಾರ್ ಅವರು ತೃತೀಯ ರಂಗ ರಚನೆಗೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಈಗ ನವೀನ್ ಪಟ್ನಾಯಕ್ ಕೂಡ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ‘ನಮ್ಮ ಪಕ್ಷ ಬಿಜು ಜನತಾ ದಳ (ಬಿಜೆಡಿ) ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ನಮ್ಮ ಯೋಜನೆ ಅದೇ ಆಗಿದೆ’ ಎಂದು ಹೇಳಿದ್ದಾರೆ.

‘ಬಿಜೆಡಿ ಪಕ್ಷ ಯಾವತ್ತೂ ಬಿಜೆಪಿಗೆ ಮೈತ್ರಿ ಪಕ್ಷವಲ್ಲ. ಆದರೆ ಕೆಲವೊಮ್ಮೆ ಬೆಂಬಲ ನೀಡಿದೆ. 2024ರ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತೇವೆ’ ಎಂದಿದ್ದಾರೆ. ಹಾಗೇ, ತಾವು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು ರಾಜಕೀಯ ವಿಷಯಕ್ಕೆ ಸಂಬಂಧಪಟ್ಟಂತೆ ಅಲ್ಲ. ಒಡಿಶಾದ ಅಗತ್ಯಗಳನ್ನು ಹೇಳಲು. ಪುರಿಯಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಅವರೊಂದಿಗೆ ಚರ್ಚಿಸಿದೆ. ಪ್ರಧಾನಿ ಮೋದಿಯವರು ಖಂಡಿತ ಸಹಾಯ ಮಾಡುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ: Hockey World Cup | ಹಾಕಿ ವಿಶ್ವ ಕಪ್​ ಗೆದ್ದರೆ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ; ಸಿಎಂ ಪಟ್ನಾಯಕ್‌

ಅದೇನೇ ಇರಲಿ ‘2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ಬಿಹಾರದಲ್ಲಿ ಎನ್​ಡಿಎಯೊಟ್ಟಿಗಿನ ಮೈತ್ರಿ ಕಳಚಿಕೊಂಡು, ಆರ್​​ಜೆಡಿ ಜತೆ ಸೇರಿ ಮೈತ್ರಿ ಮಾಡಿಕೊಂಡಿರುವ ನಿತೀಶ್​ ಕುಮಾರ್​ಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿಕೆ ಸ್ವಲ್ಪ ಹಿನ್ನೆಡೆ ತಂದುಕೊಟ್ಟಿದೆ. ನಿತೀಶ್ ಕುಮಾರ್ ಅವರು ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸಿ, ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಕಣಕ್ಕೆ ಇಳಿಯುವ ಉತ್ಸಾಹದಲ್ಲಿ ಇದ್ದಾರೆ. ಆದರೆ ಒಂದೊಂದೇ ಪಕ್ಷಗಳು ಹಿಂದೆ ಸರಿಯುತ್ತಿರುವುದರಿಂದ ಅವರು ತಮ್ಮ ಕೆಲಸದಲ್ಲಿ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.

Exit mobile version