ಭುವನೇಶ್ವರ್ : ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ಚಂದ್ರ ದಾಸ್ ಎಂಬುವನಿಂದ ಗುಂಡೇಟು ತಿಂದ ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ (Naba Kishore Das) ಸ್ಥಿತಿ ತೀವ್ರ ಗಂಭೀರವಾಗಿದೆ. ಅವರಿಗೆ ಭುವನೇಶ್ವರ್ದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಾರ್ಸುಗುಡ ಜಿಲ್ಲೆಯ ಗಾಂಧಿ ಚೌಕ್ ಬಳಿಯಿರುವ ಬ್ರಜರಾಜನಗರದಲ್ಲಿ ನೂತನವಾಗಿ ನಿರ್ಮಾಣವಾದ ಬಿಜು ಜನತಾ ದಳ ಪಕ್ಷದ ಕಚೇರಿ ಉದ್ಘಾಟನೆಗಾಗಿ ತೆರಳಿದ್ದ ಸಚಿವ ನಬಾ ದಾಸ್ ಅವರು, ಅಲ್ಲಿನ ಗಾಂಧಿ ಚೌಕದ ಬಳಿ ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆ, ಅಲ್ಲಿಯೇ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಗೋಪಾಲ್ ಚಂದ್ರ ದಾಸ್ ತಮ್ಮ ಸರ್ವೀಸ್ ರಿವಾಲ್ವರ್ನಿಂದ ಫೈರಿಂಗ್ ಮಾಡಿದ್ದ. ಒಟ್ಟು ನಾಲ್ಕು ಗುಂಡುಗಳನ್ನು ಹಾರಿಸಿದ್ದ, ಅದರಲ್ಲಿ ಎರಡು ಗುಂಡುಗಳು ಸಚಿವರ ಎದೆಗೇ ನಾಟಿದೆ.
ಗಂಭೀರ ಗಾಯಗೊಂಡ ಆರೋಗ್ಯ ಸಚಿವರನ್ನು ಜಾರ್ಸುಗುಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಸಾಕಾಗಲಿಲ್ಲ. ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಹೋಗಿದ್ದರಿಂದ ಏರ್ಲಿಫ್ಟ್ ಮಾಡಿ ಭುವನೇಶ್ವರ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪೋಲೋದಲ್ಲಿ ಸಚಿವರಿಗೆ ಸರ್ಜರಿ ಮಾಡಿ, ಗುಂಡುಗಳನ್ನು ಹೊರತೆಗೆಯಲಾಗಿದೆ. ಆದರೆ ಅವರ ಆರೋಗ್ಯದಲ್ಲಿ ಕಿಂಚಿತ್ತೂ ಸುಧಾರಣೆಯಿಲ್ಲ ಎನ್ನಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಸಚಿವರ ಆರೋಗ್ಯ ವಿಚಾರಿಸಿದ್ದಾರೆ. ಹಾಗೇ, ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಒಡಿಶಾ ಪೊಲೀಸ್ ಕ್ರೈಂ ಬ್ರ್ಯಾಂಚ್ಗೆ ಸೂಚಿಸಿದ್ದಾರೆ. ಇನ್ನು ಪೊಲೀಸ್ ಅಧಿಕಾರಿ ಗುಂಡು ಹೊಡೆದಿದ್ದೇಕೆ ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ. ಆತನನ್ನು ಉನ್ನತ ಮಟ್ಟದ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಒಡಿಶಾ ಆರೋಗ್ಯ ಸಚಿವರ ಎದೆಗೇ ಶೂಟ್ ಮಾಡಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ; ಕಾರು ಇಳಿಯುತ್ತಿದ್ದಂತೆ ಬಿತ್ತು ಗುಂಡು!